ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಿದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಪ್ರತಿಭಟನೆ, ಲಾಠಿ ಚಾರ್ಜ್ ಮೂಲಕ ಸುದ್ದಿಯಾಗಿ ರಾಜಕೀಯ ಪಕ್ಷಗಳ ಮೇಲಾಟಕ್ಕೂ ವೇದಿಕೆಯಾಗಿ ಪರಿಣಮಿಸಿತ್ತು. ಅದೇ ಮಂಡ್ಯದ ಗಾಂಧಿನಗರದಲ್ಲಿ ಜೈ ಭೀಮ್ ಗೆಳಯರ ಬಳಗದಿಂದ ಆಯೋಜಿಸಲಾಗಿದ್ದ ಗಣೇಶೋತ್ಸವದ ಅಂಗವಾಗಿ ಹಿಂದೂ -ಮುಸ್ಲಿಮರಿಂದ ಅದ್ಧೂರಿ ಗಣೇಶ ವಿಸರ್ಜನೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಯುವಕರು ಸಾಮರಸ್ಯ ಮೆರೆದು ಮಾದರಿಯಾಗಿದ್ದಾರೆ. ಮಂಡ್ಯದ ಗಾಂಧಿ ನಗರದ 9ನೇ ಕ್ರಾಸ್ ನಲ್ಲಿ ಹಿಂದೂ ಮುಸ್ಲಿಂ ಯುವಕರು ಸೇರಿ ಅದ್ಧೂರಿಯಾಗಿ ಗಣೇಶನ ವಿಸರ್ಜನೆ ನಡೆಸಿ ಮಾದರಿಯಾಗಿದ್ದಾರೆ. ಮುಸ್ಲಿಂ ಟೋಪಿ, ಹಿಂದು ಕೇಸರಿ ಶಾಲು ಪರಸ್ಪರ ವಿನಿಮಯ ಮಾಡಿಕೊಂಡು ಮೆರವಣಿಗೆಯಲ್ಲಿ ಎರಡು ಕೋಮಿನ ಯುವಕರು ಭಾಗವಹಿಸಿ ಮೆರುಗು ತಂದಿದ್ದಾರೆ. ಗಣೇಶನ ಮೆರವಣಿಗೆಯಲ್ಲಿ ಜೈಕಾರ ಕೂಗುತ್ತಾ ನೃತ್ಯ ಮಾಡಿ ಯುವಕ ಯುವತಿಯರು ಸಂಭ್ರಮಿಸಿದರು.
ಮದ್ದೂರು ಗಲಭೆ ಬಳಿಕ ಬುಧವಾರ ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ನಡೆದಿದ್ದು, ಬಿಜೆಪಿಯ ರಾಜ್ಯ ನಾಯಕರು ಪಾಲ್ಗೊಂಡಿದ್ದರು. ರಾಜ್ಯದ ಕಾಂಗ್ರೆಸ್ ಸರ್ಕಾರವು ಮತಗಳಿಗಾಗಿ ಮುಸ್ಲಿಮರನ್ನು ಓಲೈಸಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸುವುದಾಗಿ ಹೇಳಿದ್ದರು. ಎಂಎಲ್‌ಸಿ ಸಿಟಿ ರವಿ ಪ್ರಚೋದನಕಾರಿ ಭಾಷಣ ಮಾಡಿದ್ದು, ಅವರ ವಿರುದ್ಧ ಕೇಸ್ ಕೂಡ ದಾಖಲಾಗಿದೆ.
ಮದ್ದೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪದಡಿ ಹಲವು ಮುಸ್ಲಿಮರನ್ನು ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.