Saturday, September 13, 2025
Menu

ಹಿಂದೂ ಧರ್ಮದ ಮೂಢನಂಬಿಕೆಗಳ ವಿರೋಧ ಲಿಂಗಾಯತ ಧರ್ಮದ ವೈಶಿಷ್ಟ್ಯತೆ

ಬೆಳಗಾವಿ ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ “ಬಸವ ಸಂಸ್ಕೃತಿ ಅಭಿಯಾನ” ಕಾರ್ಯಕ್ರಮ ನಡೆಯಿತು.

ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, “ಹಿಂದೂ ಧರ್ಮ ಎನ್ನುವುದು ಧರ್ಮವಲ್ಲ, ಅದು ಒಂದು ಜೀವನ ಪದ್ಧತಿ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮವಾಗಿದ್ದು, ಅದು ಎಂದಿಗೂ ಹಿಂದೂ ಧರ್ಮವನ್ನು ಟೀಕಿಸಿಲ್ಲ. ಬದಲಾಗಿ ಅಲ್ಲಿನ ಕಂದಾಚಾರ, ಮೂಢನಂಬಿಕೆ ಮತ್ತು ಮೇಲು-ಕೀಳು ಭಾವನೆಗಳನ್ನು ಮಾತ್ರ ವಿರೋಧಿಸಿದೆ” ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ದೊರಕಬೇಕೇ ಎಂಬ ಚರ್ಚೆಗೆ ಉತ್ತರಿಸಿದ ಡಾ. ಸಿದ್ಧರಾಮ ಸ್ವಾಮೀಜಿ, “ನಾಗಮೋಹನದಾಸ್ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಒಪ್ಪಿ ಕೇಂದ್ರಕ್ಕೆ ಕಳುಹಿಸಿದೆ. ಮಾನ್ಯತೆ ಸಿಕ್ಕರೆ ಅಲ್ಪಸಂಖ್ಯಾತ ಸ್ಥಾನಮಾನ ದೊರಕುತ್ತದೆ, ಸೌಲಭ್ಯಗಳು ಲಭಿಸುತ್ತವೆ. ಆಗ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ” ಎಂದರು.

ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜನರಲ್ಲಿ ಲಿಂಗಾಯತ ಧರ್ಮದ ಕುರಿತ ಗೊಂದಲ ನಿವಾರಣೆಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾಜಕೀಯ ಒಗ್ಗಟ್ಟಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಡಿ ಹಂದಿಗುಂದದ ಶಿವಾನಂದ ಸ್ವಾಮೀಜಿ, “ಜನಸಮುದಾಯ ಎಚ್ಚರವಾದಾಗ ರಾಜಕಾರಣಿಗಳು ಖಂಡಿತ ಒಗ್ಗೂಡುತ್ತಾರೆ” ಎಂದು ಭರವಸೆ ನೀಡಿದರು.

ಮಾತೆ ವಾಗ್ದೇವಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಬಸವ ತತ್ವಗಳು ಅಗತ್ಯ. ವಚನ ಸಾಹಿತ್ಯದಲ್ಲಿರುವ ಶೀಲ, ಕ್ಷಮೆ ಮತ್ತು ಕರುಣೆ ಪಾಠ್ಯಕ್ರಮದಲ್ಲಿ ಅಳವಡಿಸಬೇಕು” ಎಂದು ಅಭಿಪ್ರಾಯಪಟ್ಟರು. ಡಾ. ಸಿದ್ಧರಾಮ ಸ್ವಾಮೀಜಿ, ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣ ನಿಷ್ಪ್ರಯೋಜಕ ಎಂದು ಹೇಳಿ, “ಶಿಕ್ಷಕರು ಸಚ್ಚಾರಿತ್ರ್ಯವಂತರಾದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” ಎಂದು ಸ್ಪಷ್ಟಪಡಿಸಿದರು.

ಬಸವಧರ್ಮ ಮತ್ತು ಲಿಂಗಾಯತ ಎಂಬ ಹೆಸರುಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಡಾ. ಸಿದ್ಧರಾಮ ಸ್ವಾಮೀಜಿ, “ಬಸವಣ್ಣನವರು ಸ್ಥಾಪಿಸಿದ ಕಾರಣ ಇದನ್ನು ಬಸವಧರ್ಮವೆಂದೂ, ಶರಣರು ಪ್ರಚಾರ ಮಾಡಿದ ಕಾರಣ ಶರಣಧರ್ಮವೆಂದೂ ಕರೆಯಲಾಗುತ್ತದೆ. ಎರಡೂ ಒಂದೇ. ಆದರೆ ವ್ಯಾಪಕವಾಗಿ ಬಳಕೆಯಲ್ಲಿರುವ ಲಿಂಗಾಯತ ಎಂಬ ಹೆಸರು ಸೂಕ್ತ” ಎಂದರು.

ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಸಂವಾದ ನಿರ್ವಹಿಸಿದರು. ರಾಜಶೇಖರ ಪಾಟೀಲ ನಿರೂಪಣೆ ನಡೆಸಿದರು. ಕಾರ್ಯಕ್ರಮದ ಆರಂಭದಲ್ಲಿ ಅನುಭವ ಮಂಟಪದ ಬೃಹತ್ ತೈಲಚಿತ್ರವನ್ನು ಅನಾವರಣಗೊಳಿಸಿ “ವಚನ ಪರಿಮಳ” ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಅನೇಕ ಮಠಾಧೀಶರು, ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published. Required fields are marked *