ಮಧುಸೂದನ್ ಅವರ ಸಮಿತಿ ಮತ್ತು ಹಿಂದುಳಿದ ವರ್ಗಗಳ ಆಯೋಗ ವೈಜ್ಞಾನಿಕ ಮಾನದಂಡದಲ್ಲಿ ಸಮೀಕ್ಷೆ ನಡೆಸಿ ಡಿಸೆಂಬರ್ ಒಳಗೆ ವರದಿ ನೀಡಲಿದೆ. ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಕುರಿತು ಮುಖ್ಯಮಂತ್ರಿ ಕೃಷ್ಣಾದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ ಎಂದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಕುರಿತ ಮುಖ್ಯಾಂಶಗಳು ಹೀಗಿವೆ, 2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿದ್ದರು. ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿ 10ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗ ವಹಿಸಲಾಗಿದೆ.
ರಾಜ್ಯದಲ್ಲಿ ಸುಮಾರು 7ಕೋಟಿ ಜನಸಂಖ್ಯೆಯಿದ್ದು, ಸುಮಾರು 2ಕೋಟಿಯಷ್ಟು ಕುಟುಂಬಗಳಿವೆ. ಇವರೆಲ್ಲರಿಗೂ ಸಮಾನ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿ ಗೊತ್ತಾದರೆ ಮಾತ್ರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಸಾಧ್ಯವಿದೆ. ದತ್ತಾಂಶ ಸರಿಯಾಗಿ ಗೊತ್ತಾದರೆ ಮಾತ್ರ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.
7 ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮಧುಸೂಧನ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ಸಮೀಕ್ಷೆ ಕಾರ್ಯ ಕೈಗೊಳ್ಳಲಿದೆ. ಎಚ್ಚರಿಕೆಯಿಂದ, ಪ್ರತಿಯೊಬ್ಬರನ್ನೂ ಒಳಗೊಂಡಂತೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಡಿಸೆಂಬರ್ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ದಸರಾ ರಜೆ ಅವಧಿಯಲ್ಲಿ 1.75 ಲಕ್ಷ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಲಾಗುವುದು. ಅವರಿಗೆ ರೂ.20ಸಾವಿರವರೆಗೆ ಗೌರವ ಸಂಭಾವನೆ ನೀಡಲಾಗುವುದು. ಶಿಕ್ಷಕರ ಸಂಭಾವನೆಗೆ ರೂ. 325 ಕೋಟಿ ವೆಚ್ಚವಾಗಲಿದೆ.
ತಾತ್ಕಾಲಿಕವಾಗಿ ರೂ.420ಕೋಟಿ ಸಮೀಕ್ಷೆ ಕಾರ್ಯಕ್ಕೆ ನಿಗದಿಪಡಿಸಲಾಗಿದೆ. ಆಯೋಗ ವೈಜ್ಞಾನಿಕವಾಗಿ, ಯಾವುದೇ ಲೋಪವಾಗದಂತೆ ಸಮೀಕ್ಷೆ ಕಾರ್ಯ ನಡೆಸಬೇಕು. ನಿಗದಿತ ಅವಧಿಯ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು.
ನಾಗಮೋಹನ ದಾಸ್ ಅವರು ಒಳಮೀಸಲಾತಿ ಸಮೀಕ್ಷೆಗೆ ವಿಶೇಷ ತಂತ್ರಜ್ಞಾನ ಬಳಸಿಕೊಂಡ ರೀತಿಯಲ್ಲಿ ಈ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುವುದು. ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಮನೆಯ ಜಿಯೋ ಟ್ಯಾಗ್ ಮಾಡಿ UHID ವಿಶೇಷ ಸಂಖ್ಯೆಯನ್ನು ನಮೂದಿಸಲಾಗುವುದು. ಈಗಾಗಲೇ 1.55 ಲಕ್ಷ ಮನೆಗಳಿಗೆ ಸಂಖ್ಯೆಯನ್ನು ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಸಮೀಕ್ಷೆಯನ್ನು ಸಹ ಮಾಡಲಾಗುವುದು. ಸಮೀಕ್ಷೆ ಸಂದರ್ಭದಲ್ಲಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಕಾರ್ಯವನ್ನು ಮಾಡಲಾಗುವುದು.
ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲರೂ ಪ್ರತಿಯೊಂದು ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ವೈಜ್ಞಾನಿಕ ಸಮೀಕ್ಷೆ ಸಾಧ್ಯವಿದೆ. ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಬಹುದು. ಆನ್ಲೈನ್ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಮೀಕ್ಷೆ ಆರಂಭವಾಗುವ ಪೂರ್ವದಲ್ಲೇ ಆಶಾ ಕಾರ್ಯಕರ್ತರು ಎಲ್ಲರ ಮನೆಗಳಿಗೆ ಹೋಗಿ ಸಮೀಕ್ಷೆಯ ನಮೂನೆಯನ್ನು ಒದಗಿಸಲಿದ್ದಾರೆ. ಇದರಿಂದ ಸರಿಯಾದ ಮಾಹಿತಯನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ಒಟ್ಟು 60 ಪ್ರಶ್ನೆಗಳನ್ನು ಫೈನಲ್ ಮಾಡಲಾಗಿದ್ದು ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸಮೀಕ್ಷೆ ನಡೆಸಲಿದ್ದಾರೆ
ಜಾತಿ ಹೇಳಿಕೊಳ್ಳಲು ಕಷ್ಟ ಆದವರು ಸಹಾಯವಾಣಿಗೆ ಕರೆ ಮಾಡಿ ಜಾತಿ ಹೇಳಬಹುದು. ಯಾವುದೇ ನ್ಯೂನ್ಯತೆಗಳು ಇಲ್ಲದಂತೆ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ ಈ ಬಾರಿ ಇಲ್ಲದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದದ್ದನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸುತ್ತಾರೆ.