ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಪತ್ನಿಯನ್ನು ತವರುಮನೆಗೆ ಕರೆದುಕೊಂಡು ಹೋದ ಕಾರಣಕ್ಕೆ ಸಿಟ್ಟಿಗೆದ್ದ ಅಳಿಯನೊಬ್ಬ ಅತ್ತೆಯನ್ನು ಹತ್ಯೆ ಮಾಡಿದ್ದಾನೆ. ಫೈರೋಜಾ (58) ಕೊಲೆಯಾದ ಅತ್ತೆ. ರಸೂಲ್
ಕೊಲೆಗಾರ ಅಳಿಯ.
ರಾಮನಾಥಪುರ ನಿವಾಸಿ ಫೈರೋಜಾ ತನ್ನ ಮಗಳು ಶೆಮಿನಾ ಬಾನು ಎಂಬಾಕೆಯನ್ನು ರಸೂಲ್‌ಗೆ ಮದುವೆ ಮಾಡಿ ಕೊಟ್ಟಿದ್ದರು. ವಿವಾಹವಾಗಿ 10 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಪತ್ನಿಯ ಮೇಲೆ ರಸೂಲ್ ಅನುಮಾನಿಸಲು ಶುರುಮಾಡಿದ್ದ. ಇದರಿಂದ ನೊಂದಿದ್ದ ಶೆಮಿನಾ ಬಾನು, ಗಂಡನ ಕಿರುಕುಳದ ಬಗ್ಗೆ ತಾಯಿಗೆ ತಿಳಿಸಿದ್ದಳು.
ತಾಯಿ ಫೈರೋಜಾ, ಅಳಿಯ ತನ್ನ ಮಗಳಿಗೆ ಕೊಡುತ್ತಿರುವ ಕಿರುಕುಳಕ್ಕೆ ಹೆದರಿ ಮಗಳನ್ನು ತವರು ಮನೆಗೆ ಕರೆದೊಯ್ದಿದ್ದರು. ಇದರಿಂದ ಇನ್ನಷ್ಟು ಕುಪಿತಗೊಂಡ ರಸೂಲ್ ಅತ್ತೆ ಮನೆಗೆ ಬಂದು ಜಗಳವಾಡಿದ್ದಾನೆ.
ಅತ್ತೆಯ ಮೇಲೆ ಎರಗಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ತಾಯಿ ರಕ್ಷಣೆಗೆ ಬಂದ ಪತ್ನಿಯ ಮೇಲೆಯೂ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಚಾಕು ಇರಿತದಿಂದ ತೀವ್ರ ರಕ್ತಸ್ರಾವಗೊಂಡ ಫೈರೋಜಾ ಅಸು ನೀಗಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭಟ್ಕಳದ ಗುಡ್ಡದಲ್ಲಿ ಜಾನುವಾರುಗಳ ಮೂಳೆ ಪತ್ತೆ
ಭಟ್ಕಳ ಅರಣ್ಯ ಇಲಾಖೆಗೆ ಸೇರಿದ ಗುಡ್ಡ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಜಾನುವಾರುಗಳ ಮೂಳೆಗಳು ಪತ್ತೆಯಾಗಿವೆ. ಭಟ್ಕಳ ಮುಗ್ದಂ ಕಾಲೋನಿ ಮೇಲಿನ ಅರಣ್ಯ ಇಲಾಖೆಗೆ ಸಂಬಂಧಿಸಿದ ಗುಡ್ಡ ಪ್ರದೇಶದಲ್ಲಿ ಈ ಅವಶೇಷಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಎರಡು-ಮೂರು ದಿನಗಳ ಹಿಂದೆಯೂ ಗೋಹತ್ಯೆ ನಡೆದ ರಕ್ತದ ಕಲೆಗಳು ಮತ್ತು ಮೂಳೆಗಳುಪತ್ತೆಯಾಗಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಯಾರಿಗೂ ತಿಳಿಯದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಗುಡ್ಡದಲ್ಲಿ ದನಗಳ ಅವಶೇಷಗಳನ್ನು ಎಸೆಯಲಾಗುತ್ತಿದೆ. ಸಂಬಂಧಿಸಿದ ವೀಡಿಯೊ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ತಂಡವು ತನಿಖೆ ಆರಂಭಿಸಿದೆ.
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಭಟ್ಕಳ ಶಹರ ಠಾಣೆಯ ಪೋಲಿಸರು, ಪ್ರಕರಣದ ಪೂರಕ ವಿಚಾರಣೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಿದ್ದಾರೆ.