ಅಮೆರಿಕದ ಡಲ್ಲಾಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮತ್ತು ಮಗನ ಎದುರೇ ಕರ್ನಾಟಕ ಮೂಲದ ವ್ಯಕ್ತಿಯನ್ನು ಮಚ್ಚಿನಿಂದ ಹಲ್ಲೆಗೈದು ಶಿರಚ್ಛೇದ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕರ್ನಾಟಕದ ಚಂದ್ರ ನಾಗಮಲ್ಲಯ್ಯ (೩೭) ಎಂದು ಗುರುತಿಸಲಾಗಿದೆ. ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ ಕೊಲೆಗಾರ.
ಡಲ್ಲಾಸ್‌ನ ಮೋಟೆಲ್‌ವೊಂದರಲ್ಲಿ ಚಂದ್ರ ನಾಗಮಲ್ಲಯ್ಯ ಅವರು ಮುರಿದ ವಾಷಿಂಗ್ ಮೆಷಿನ್ ಬಳಸದಂತೆ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್‌ಗೆ ಹೇಳಿದ್ದಾರೆ. ಚಂದ್ರ ನಾಗಮಲ್ಲಯ್ಯ ತಾವು ಏನು ಹೇಳುತ್ತಿದ್ದೇನೆ ಎಂಬುದನ್ನು ಭಾಷಾಂತರ ಮಾಡಿ ಹೇಳುವಂತೆ ಇನ್ನೊಬ್ಬರು ಉದ್ಯೋಗಿಯನ್ನು ಕೇಳಿಕೊಂಡಿದ್ದಾರೆ. ಇದರಿಂದ ಕೆರಳಿದ ಮಾರ್ಟಿನೇಜ್ ಮಚ್ಚಿನಿಂದ ಅವರ ಶಿರಚ್ಛೇದ ಮಾಡಿದ್ದಾನೆ.
ಹೂಸ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಗೆ ಆಘಾತ ವ್ಯಕ್ತಪಡಿಸಿ ಚಂದ್ರ ನಾಗಮಲ್ಲಯ್ಯ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಕೆಲಸದ ಸ್ಥಳದಲ್ಲಿ ಭೀಕರವಾಗಿ ಹತ್ಯೆಯಾಗಿರುವ ಚಂದ್ರ ನಾಗಮಲ್ಲಯ್ಯ ಅವರ ದುರಂತ ಸಾವಿಗೆ ಹೂಸ್ಟನ್‌ನ ಭಾರತೀಯ ಕಾನ್ಸುಲೇಟ್ ಜನರಲ್ ಸಂತಾಪ ಸೂಚಿಸುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
“ನಾವು ಚಂದ್ರ ನಾಗಮಲ್ಲಯ್ಯ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತೇವೆ. ಡಲ್ಲಾಸ್ ಪೊಲೀಸರು ಕೊಲೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈ ವಿಷಯದ ಬಗ್ಗೆ ನಾವು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದೇವೆ” ಎಂದು ಹೂಸ್ಟನ್ ರಾಯಭಾರ ಕಚೇರಿ ತಿಳಿಸಿದೆ.