Thursday, September 11, 2025
Menu

ಭಾರತ-ಪಾಕ್‌ ಟಿ20 ಏಷ್ಯಾಕಪ್‌ ಪಂದ್ಯ ರದ್ದು: ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ

supreme court

ಸೆಪ್ಟಂಬರ್‌ 14ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಟಿ20 ಏಷ್ಯಾಕಪ್‌ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರಾಕರಿಸಿದೆ.

2025ರ ಟಿ20 ಏಷ್ಯಾಕಪ್‌ ವೇಳಾಪಟ್ಟಿ ಪ್ರಕಟವಾದಾಗಿನಿಂದಲೂ ಭಾರತ – ಪಾಕ್‌ ನಡುವಿನ ಪಂದ್ಯಕ್ಕೆ ವಿರೋಧ ಕೇಳಿಬರುತ್ತಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಹೀಗಾಗಿ ಇಂಡೋ-ಪಾಕ್‌ ಪಂದ್ಯ ನಿಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಪಂದ್ಯವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಆದರೆ ಸುಪ್ರೀಂಕೋರ್ಟ್‌ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಕ್ಕೂ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು, ಇದು‌ ಕೇವಲ ಒಂದು ಪಂದ್ಯ ಅಷ್ಟೇ ಎಂದು ಹೇಳಿದೆ.

ಊರ್ವಶಿ ಜೈನ್‌ ನೇತೃತ್ವದಲ್ಲಿ ನಾಲ್ವರು ಕಾನೂನು ವಿದ್ಯಾರ್ಥಿಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಸೆ.14ರಂದು ದುಬೈನಲ್ಲಿ ಏಷ್ಯಾಕಪ್‌ ಭಾಗವಾಗಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್‌ ಪಂದ್ಯವನ್ನ ರದ್ದುಗೊಳಿಸುವಂತೆ ಕೋರಲಾಗಿತ್ತು. ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು, ಈ ವೇಳೆ ನ್ಯಾ. ಮಹೇಶ್ವರಿ ತುರ್ತು ಏನಿದೆ ಎಂದು ಎಂದು ಪ್ರಶ್ನಿಸಿ, ಭಾನುವಾರ ಪಂದ್ಯ ಇದೆ, ಏನು ಮಾಡುವುದಕ್ಕಾಗುತ್ತದೆ, ಅದು ಕೇವಲ ಪಂದ್ಯ ಅಷ್ಟೇ ಎಂದಿದ್ದಾರೆ.

ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್‌ ಪಂದ್ಯ ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆ ಕುರಿತು ತಪ್ಪು ಸಂದೇಶ ನೀಡುತ್ತದೆ. ಭಯೋತ್ಪಾದನೆಗೆ ಆಶ್ರಯ ನೀಡುವ ರಾಷ್ಟ್ರಗಳೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಸೈನಿಕರ ನೈತಿಕತೆಯನ್ನು ಹಾಳು ಮಾಡಿದಂತಾಗುತ್ತದೆ. ರಾಷ್ಟ್ರದ ಹಿತಾಸಕ್ತಿ, ನಾಗರಿಕರ ಜೀವನ ಹಾಗೂ ಸೈನಿಕರ ತ್ಯಾಗಕ್ಕಿಂತ ಕ್ರಿಕೆಟ್‌ ಹೆಚ್ಚಿನದ್ದಲ್ಲ ಎಂದು ಅರ್ಜಿದಾರರು ವಾದಿಸಿದರು.

Related Posts

Leave a Reply

Your email address will not be published. Required fields are marked *