ಮದ್ದೂರಿನಲ್ಲಿ ಬುಧವಾರ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದಡಿ ಎಂಎಲ್‌ಸಿ ಸಿಟಿ ರವಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ. ಸಮುದಾಯಗಳ ಮಧ್ಯೆ ದ್ವೇಷ ಉಂಟುಮಾಡುವ ಮತ್ತು ಸೌಹಾರ್ದ ಭಾವನೆಗಳಿಗೆ ಧಕ್ಕೆ ತರುವ ವೈರತ್ವ, ದ್ವೇಷ ಉಂಟಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿರುವುದಾಗಿ ಆರೋಪಿಸಲಾಗಿದೆ.
ಮದ್ದೂರಿನಲ್ಲಿ ಬುಧವಾರ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸಿಟಿ ರವಿ, ಅವರು 5% ಇದ್ದಾಗಲೇ ಬಾಲ ಬಿಚ್ಚುತ್ತಿದ್ದಾರೆ. 50% ಆದಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುವುದಕ್ಕೆ ಆಗುತ್ತಾ, ಸಮಾಜ ಒಡೆಯುತ್ತಾರೆ. ಕೆಲವು ಕುತಂತ್ರಿಗಳು ವೋಟಿನ ಆಸೆಗಾಗಿ ಹಿಂದೂ ಸಮಾಜವನ್ನು ಒಡೆಯುತ್ತಾರೆ. ಮುಸಲ್ಮಾನರು ಪಾಕಿಸ್ತಾನ ಜಿಂದಾಬಾದ್, ಬಾಂಬ್ ಹಾಕಿದರೂ ಕೂಡ ಎಸ್‌ಎಸ್ ಅಂತಾರೆ. ರಾಮಮಂದಿರದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದಾಗಲೇ ಇವರಿಗೆ ಬುದ್ಧಿ ಕಲಿಸಬೇಕಾಗಿತ್ತು. ಈಗ ಈ ರೀತಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನೀವು ಹೊರಗಡೆಯಿಂದ ಬಂದವರು, ನಾವು ಇಲ್ಲೇ ಇರುವವರು, ತೊಡೆ ತಟ್ಟೋಕೆಲಸ ಮಾಡಬೇಡಿ. ತೊಡೆ ಮುರಿತೀವಿ. ತಲೆನೂ ತೆಗಿತೀವಿ, ನಮಗೆ ತೊಡೆ ಮುರಿಯೋದು ಗೊತ್ತು. ಕಲ್ಲು ಹೊಡೆಯುವವರನ್ನು ಕಲ್ಲಿನ ಒಳಗಡೆ ಸಮಾಧಿ ಮಾಡೋ ತಾಕತ್ತು ಹಿಂದೂ ಸಮಾಜಕ್ಕಿದೆ ಎಂದು ಹೇಳಿದ್ದರು.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟದ ಬಳಿಕ ಆರ್. ಅಶೋಕ, ಅಶ್ವತ್ಥ ನಾರಾಯಣ, ಸಿಟಿ ರವಿ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಬುಧವಾರ ಅಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಿ ಅದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸರಕಾರವು ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿದೆ, ಹಿಂದೂಗಳ ಮೇಲೆ ಮುಸ್ಲಿಮರು ದೌರ್ಜನ್ಯ ಮಾಡುತ್ತಿದ್ದಾರೆಂದು ಕಿಡಿ ಕಾರಿದ್ದಾರೆ.