ದೆಹಲಿ ಪೊಲೀಸರು, ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ ಹಾಗೂ ರಾಂಚಿ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ.
ಬೊಕಾರೊ ಮೂಲದ ಆಶರ್ ಡ್ಯಾನಿಶ್ ಎಂಬ ಪ್ರಮುಖ ಆರೋಪಿಯನ್ನು ರಾಂಚಿಯಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕವು ಆಶರ್ ಡ್ಯಾನಿಶ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿತ್ತು.
ದೆಹಲಿ ಪೊಲೀಸರು, ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ ಹಾಗೂ ರಾಂಚಿ ಪೊಲೀಸರು ಏಕಕಾಲದಲ್ಲಿ ನಡೆಸಿದ ಸಂಘಟಿತ ದಾಳಿಯಲ್ಲಿ ಅಫ್ತಾಬ್ ಎಂಬ ಮತ್ತೊಬ್ಬ ಶಂಕಿತ ಐಸಿಸ್ ಉಗ್ರನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತರು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಸುದ್ದಿಗೋಷ್ಠಿಯಲ್ಲೇ ಕುಸಿದು ಬಿದ್ದ ಆರೋಗ್ಯ ಸಚಿವೆ
ಸುದ್ದಿ ಗೋಷ್ಠಿ ನಡೆಯುತ್ತಿದ್ದಂತೆಯೇ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಲ್ಯಾನ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.
48 ವರ್ಷದ ಎಲಿಸಬೆಟ್ ಲ್ಯಾನ್ ಸುದ್ದಿಗೋಷ್ಠಿಯಲ್ಲಿ ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗಲೇ ವೇದಿಕೆಯಿಂದ ಕುಸಿದುಬಿದ್ದಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಚಿವೆಯನ್ನು ಅಧಿಕಾರಿಗಳು ಹಾಗೂ ವೇದಿಕೆ ಮುಂಭಾಗದಲ್ಲಿದ್ದ ಪತ್ರಕರ್ತರು ಮೇಲೆತ್ತಿ ಕೂರಿಸಿದ್ದಾರೆ. ಸ್ವಲ್ಪ ನೀರು ಕುಡಿಸಿ ವಿಶ್ರಾಂತಿ ಕೊಡಿಸಿದ್ದಾರೆ. ಲ್ಯಾನ್ ಸ್ವಲ್ಪ ಸಮಯದ ನಂತರ ಮತ್ತೆ ಸುದ್ದಿಗೋಷ್ಠಿಗೆ ಹಾಜರಾಗಿದ್ದಾರೆ. ಕಡಿಮೆ ರಕ್ತದೊತ್ತಡದಿಂದ ಹೀಗಾಗಿರಬಹುದು ಎನ್ನಲಾಗಿದೆ.