ನಿರ್ಮಾಪಕ ರಾಘವೇಂದ್ರ ಹೆಗಡೆ ಮುಂಬೈನಲ್ಲಿ ದಾಖಲಿಸಿದ್ದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯ ನೀಡಿರುವ ಆದೇಶದಿಂದ ನಟ ಧ್ರುವ ಸರ್ಜಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಧ್ರುವ ಸರ್ಜಾ ಸಿನಿಮಾ ಮಾಡಿಕೊಡುವುದಾಗಿ ಹೇಳಿ 3.10 ಕೋಟಿ ರೂಪಾಯಿ ಪಡೆದು ಸಿನಿಮಾ ಮಾಡಲು ಡೇಟ್ಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ರಾಘವೇಂದ್ರ ಹೆಗಡೆ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ ನಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಧ್ರುವ ಸರ್ಜಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಧ್ರುವ ಸರ್ಜಾ ಪರ ವಕೀಲರು ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಸೂಚಿಸಿದೆ. ಇದು ಸಿವಿಲ್ ಮೊಕದ್ದಮೆ ಆಗಿದ್ದು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಮುಂದಿನ ವಿಚಾರಣೆವರೆಗೆ ಮಾತ್ರವೇ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
ರಾಘವೇಂದ್ರ ಹೆಗಡೆ ನೀಡಿರುವ ದೂರಿನ ಅನ್ವಯ, 2018 ರಲ್ಲಿ ಧ್ರುವ ಸರ್ಜಾ ಅವರು ‘ಸೋಲ್ಜರ್’ ಹೆಸರಿನ ಸಿನಿಮಾ ಮಾಡಲು ಮುಂಗಡವಾಗಿ 3 ಕೋಟಿ ರೂಪಾಯಿ ಪಡೆದಿದ್ದರಂತೆ. ಸಿನಿಮಾದ ಚಿತ್ರಕತೆ ಬರೆಯುವವರಿಗೆ ಮತ್ತು ಪ್ರಚಾರಕ್ಕೆಂದು 28 ಲಕ್ಷ ರೂಪಾಯಿ ಪಡೆದರಂತೆ. ಆರಂಭದಲ್ಲಿ ಚಿತ್ರಕತೆ ಮಾತುಕತೆ ವಿಚಾರವಾಗಿ ಸಂಪರ್ಕದಲ್ಲಿದ್ದ ಧ್ರುವ ಸರ್ಜಾ ಆ ಬಳಿಕ ರಾಘವೇಂದ್ರ ಅವರ ಸಂಪರ್ಕಕ್ಕೆ ಸಿಗಲಿಲ್ಲವಂತೆ. ಸಿನಿಮಾ ಡೇಟ್ಸ್ ನೀಡಲಿಲ್ಲವಂತೆ.
ಧ್ರುವ ಸರ್ಜಾ ಆಪ್ತರು ಈ ಆರೋಪ ನಿರಾಕರಿಸಿದ್ದು, 2018 ರಲ್ಲಿ ರಾಘವೇಂದ್ರ ಸಿನಿಮಾ ಮಾಡಲು ಅಡ್ವಾನ್ಸ್ ನೀಡಿದ್ದರು. ಅವರು ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ಮಾಡೋಣ ಎಂದರು, ಧ್ರುವ ಸರ್ಜಾ ಕನ್ನಡದಲ್ಲಿಯೇ ಸಿನಿಮಾ ಮಾಡೋಣ ಎಂದು ಹೇಳಿದರು. ನಂತರ ಅವರೇ ನಮ್ಮ ಸಂಪರ್ಕದಿಂದ ತಪ್ಪಿ ಹೋದರು ಎಂದಿದ್ದಾರೆ.