ಕತಾರ್ ರಾಜಧಾನಿ ದೋಹಾದಲ್ಲಿ ಇಸ್ರೇಲ್ ಪಡೆಯು ಭೀಕರ ವಾಯುದಾಳಿ ನಡೆಸಿದ್ದು, ನಮ್ಮ ನಾಯಕನ ಪುತ್ರ ಸೇರಿ ಕನಿಷ್ಠ 6 ಮಂದಿ ಮೃತಪಟ್ಟಿರುವುದಾಗಿ ಹಮಾಸ್ ಬಂಡುಕೋರರ ಗುಂಪು ಅಧಿಕೃತ ಹೇಳಿಕೆ ನೀಡಿದೆ.
ಈ ದಾಳಿಯಲ್ಲಿ ಹಮಾಸ್ ನಾಯಕ ಖಲೀಲ್ ಅಲ್-ಹಯ್ಯನ ಪುತ್ರ, ಸಹಾಯಕ ಸಿಬ್ಬಂದಿ, ಭದ್ರತಾ ಅಧಿಕಾರಿ ಸೇರಿದಂತೆ ಕನಿಷ್ಠ 6 ಜನ ಪ್ರಾಣ ಕಳೆದುಕೊಂಡಿರುವುದಾಗಿ ಸಂಘಟನೆ ತಿಳಿಸಿದೆ.
ಯುದ್ಧ ನಿಲ್ಲಬೇಕು, ಗಾಜಾದಿಂದ ಸೈನ್ಯ ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಗಾಜಾವನ್ನು ನೋಡಿಕೊಳ್ಳಲು ಬೇರೆ ಸಮಿತಿ ರಚನೆಯಾಗಬೇಕು ಎಂದು ಟ್ರಂಪ್ ಎಚ್ಚರಿಕೆ ಕೊಟ್ಟ ಆ ಬೆನ್ನಲ್ಲೇ ಹಮಾಸ್ ಹಿರಿಯ ನಾಯಕರ ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ದಾಳಿ ನಡೆಸಿದೆ.
ಇದೊಂದು ಹೇಡಿತನದ ದಾಳಿ ಎಂದು ಕತಾರ್ ಆಕ್ರೋಶ ವ್ಯಕ್ತಪಡಿಸಿದೆ. ಕದನ ವಿರಾಮ ಮತ್ತು ಯುದ್ಧ ಕೈದಿಗಳ ಕುರಿತು ಮಾತುಕತೆ ನಡೆಯುತ್ತಿದ್ದಾಗಲೇ ಇಸ್ರೇಲ್ ದಾಳಿ ನಡೆಸಿರುವುದನ್ನು ಹಮಾಸ್ ಖಂಡಿಸಿದೆ. ಇದು ಆಕ್ರಮಣಕಾರಿ ಅಪರಾಧ ಕೃತ್ಯ. ಒಪ್ಪಂದ ಹಾಳುಮಾಡುವ ಹಾಗೂ ನಿರಾಕರಿಸುವ ದೃಷ್ಟಿಕೋನ ಹೊಂದಿದೆ. ಈ ಮೂಲಕ ಎಲ್ಲಾ ಅಂತಾರಾಷ್ಟ್ರೀಯ ನಿಯಮ ಮತ್ತು ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಪ್ಯಾಲೆಸ್ತೀನ್ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ಇಸ್ರೇಲ್‌ನ ದಾಳಿಯ ವೇಳೆ ಹಮಾಸ್ ನಾಯಕರು ದೋಹಾದಲ್ಲಿ ಕದನ ವಿರಾಮದ ಬಗ್ಗೆ ಚರ್ಚಿಸುತ್ತಿದ್ದರು. ಗಾಜಾ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾಪದ ಬಗ್ಗೆ ಚರ್ಚಿಸುತ್ತಿದ್ದಾಗ ದೋಹಾದಲ್ಲಿ ಹಮಾಸ್ ನಿಯೋಗದ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಇಸ್ರೇಲ್ ಸೇನೆಯು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಮಾಸ್ ನಾಯಕರ ಮೇಲೆ ವಾಯು ದಾಳಿ ನಡೆಸಿರುವುದಾಗಿ ಹೇಳಿದೆ. ದೋಹಾದಲ್ಲಿರುವ ನಾಗರಿಕರಿಗೆ ಹಾನಿಯಾಗದಂತೆ ವಾಯು ದಾಳಿ ಮಾಡಲಾಗಿದೆ. ಹಮಾಸ್ ನಾಯಕರ ವಿರುದ್ಧದ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ತಿಳಿಸಿದೆ.