ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ದರ್ಶನ್‌ಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರ್ಟ್ ನಿರಾಕರಿಸಿ, ಸ್ಥಳಾಂತರ ಮಾಡಲು ಸಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ದರ್ಶನ್‌ಗೆ ಜೈಲಿನೊಳಗೆ ಓಡಾಡಲು ಅನುಮತಿ ಕೊಟ್ಟಿದೆ.
ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ದರ್ಶನ್ ಮಾಡಿದ್ದ ಮನವಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಪುರಸ್ಕರಿಸಿದೆ. ದರ್ಶನ್‌ಗೆ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡಲು ಅನುಮತಿ ನೀಡಿ ಜೈಲಿನ ಕೈಪಿಡಿ ಅನುಸರಿಸಬೇಕು ಎಂದು ಸೂಚನೆ ನೀಡಿದೆ.
ಆರೋಪಿ ದರ್ಶನ್ ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿಯಿಂದ ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಬೇರೆ ಜೈಲಿಗೆ ಸ್ಥಳಾಂತರಿಸಲು ಐಜಿ ಕ್ರಮ ಕೈಗೊಳ್ಳಬಹುದು ಎಂದೂ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುವಾಗ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿ, ನನಗೆ ಜೈಲಿನಲ್ಲಿ ಬದುಕುವುದು ಕಷ್ಟವಾಗುತ್ತಿದೆ, ದಯವಿಟ್ಟು ನನಗೆ ವಿಷ ಕೊಡಿ, ನಾನು ಬಿಸಿಲು ನೋಡದೆ ೨೦ ದಿನ ಕಳೆದಿದೆ, ಕೈ ಫಂಗಸ್ ಬಂದಿದೆ, ನನ್ನ ಬಟ್ಟೆಗಳೆಲ್ಲ ಗಬ್ಬು ವಾಸನೆ ಬರುತ್ತಿದೆ ಎಂದು ಹೇಳಿದ್ದರು.
ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಲಾಗಿತ್ತು ಎಂಬ ಆರೋಪದ ಹಿನ್ನೆಲೆ ಜೈಲಾಧಿಕಾರಿಗಳು ಈ ಬಾರಿ ಕಠಿಣ ಕ್ರಮ ಕೈಗೊಂಡು ದರ್ಶನ್‌ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಿ ಬ್ಯಾರಕ್‌ಗೆ ಯಾರನ್ನೂ ಬಿಡದಂತೆ ಕಟ್ಟುನಿಟ್ಟು ಮಾಡಿದ್ದಾರೆ.