ನಿತ್ಯ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡಿ ಹೊಡೆದು ಬಡಿಯುತ್ತಿದ್ದ ಯುವಕನನ್ನು ಹಿಂಸೆ ತಾಳಲಾಗದೆ ತಂದೆ,ತಾಯಿ, ಅಣ್ಣ ಸೇರಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ.
ಅನಿಲ್ ಪರಪ್ಪ ಕಾನಟ್ಟಿ (32) ಕೊಲೆಯಾದ ಯುವಕ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಪರಪ್ಪ ಕಾನಟ್ಟಿ, ಅಣ್ಣ ಬಸವರಾಜ ಪರಪ್ಪ ಕಾನಟ್ಟಿ ಆರೋಪಿಗಳು. ಅನಿಲ್ ನಿತ್ಯ ಸಾರಾಯಿ ಕುಡಿದು ಬಂದು, ನನಗೆ ಮದುವೆ ಮಾಡಿ, ಜಮೀನು ಕೊಡಿ ಎಂದು ಗಲಾಟೆ ಮಾಡಿ ಮನೆವರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಹೀಗಾಗಿ ಮೂರು ಜನ ಆರೋಪಿಗಳು ಸೇರಿ ಅನಿಲ್ ಕೈ ಕಾಲು ಮತ್ತು ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಮೈ ಮೇಲೆ ಡಿಸೇಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಅನಿಲ್ ಅಣ್ಣ ಬಸವರಾಜ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ರಜೆ ಮೇಲೆ ಬಂದಿದ್ದಾಗ ಅನಿಲ್ ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ್ದ. ಆತನ ಕೊಲೆ ಮಾಡಿದ ಬಳಿಕ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅನುಮಾನಗೊಂಡು ವಿಚಾರಿಸಿದಾಗ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಆರೋಪಿ ಬಸವರಾಜ್ ಪತ್ನಿ ಲಕ್ಷ್ಮಿ ದೂರು ನೀಡಿದ್ದು, ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.