ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿರುವ ವಿಶಾಲ್ ಟ್ರೈಬೊಟೆಕ್ ತೈಲ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಕಾರ್ಖಾನೆಯ ಒಳಗಿನ ಆಯಿಲ್ ಬ್ಯಾರೆಲ್‌ಗಳು ಧಗಧಗನೆ ಉರಿದಿವೆ. ಯಾವುದೇ ಪ್ರಾಣಹಾನಿ ಆಗಿಲ್ಲ, ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ತಂಡ ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿದೆ. ಹೀಲಲಿಗೆಯಲ್ಲಿರುವ ವಿಶಾಲ್ ಟ್ರೈಬೊಟೆಕ್ ಕಾರ್ಖಾನೆಯು ತೈಲ ಉತ್ಪಾದನೆ ಮತ್ತು ಶೇಖರಣೆಗೆ ಸಂಬಂಧಿಸಿದ ಘಟಕವಾಗಿದೆ.
ಕಾರ್ಖಾನೆಯ ಒಳಗೆ ದೊಡ್ಡ ಪ್ರಮಾಣದ ಆಯಿಲ್ ಬ್ಯಾರೆಲ್‌ಗಳನ್ನು ಶೇಖರಿಸಿಡಲಾಗಿತ್ತು. ಬೆಂಕಿ ಹೊತ್ತಿಕೊಂಡು ಬ್ಯಾರೆಲ್‌ಗಳು ಉರಿಯಲಾರಂಭಿ ಕ್ಷಣಾರ್ಧದಲ್ಲಿ ಬೆಂಕಿ ಕಾರ್ಖಾನೆಯನ್ನು ಆವರಿಸಿಕೊಂಡಿದೆ. ಕಾರ್ಖಾನೆಯ ಒಳಗಿನ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಮತ್ತು ಇತರ ಸಾಮಗ್ರಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಹೋಗಿವೆ. ಕಾರ್ಖಾನೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದುರಂತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿತ್ತು. ಹಲವು ಗಂಟೆಗಳ ನಡೆದ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು, ಇಂದು ಭಾನುವಾರ ಆಗಿರುವುದರಿಂದ ರಜೆ ಇತ್ತು, ಹೀಗಾಗಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಮಾಡಿವೆ.
ಕುಡಿಯಲು ಹಣ ನೀಡದಿದ್ದಕ್ಕೆ ತಾಯಿಯ ಮನೆಗೆ ಬೆಂಕಿ ಹಚ್ಚಿದ ಮಗ
ಮೈಸೂರಿನ ರಮ್ಮನಹಳ್ಳಿಯಲ್ಲಿ .ಕುಡಿಯಲು ಹಣ ನೀಡದಿದ್ದಕ್ಕೆ ಮಗನೇ ತಾಯಿಯ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಆರೋಪಿ ಶಿವಪ್ರಕಾಶ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಮ್ಮನಹಳ್ಳಿಯಲ್ಲಿ ಕಲಾವತಿ ಎಂಬ ಮಹಿಳೆ ಸಣ್ಣ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಶಿವಪ್ರಕಾಶ್ ಎರಡನೇ ಮಗ. ಕಲಾವತಿಯವರ ಪತಿ ಮತ್ತೊಂದು ಮದುವೆಯಾಗಿ ಪ್ರತ್ಯೇಕವಿದ್ದಾರೆ.
ಶಿವಪ್ರಕಾಶ್ ಕುಡಿತದ ಚಟ ಹೊಂದಿದ್ದು, ತಾಯಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ಎರಡು ದಿನಗಳ ಹಿಂದೆ ಕುಡಿಯಲು ಹಣ ಕೇಳಿದ್ದ. ಕಲಾವತಿಯವರು ಹಣ ಇಲ್ಲ ಎಂದು ತಿಳಿಸಿದಾಗ ಕೋಪಗೊಂಡು ಆಕೆ ಮನೆಯೊಳಗಿರುವಾಗಲೇ ಬೆಂಕಿ ಹಚ್ಚಿದ್ದಾನೆ. ಕಲಾವತಿಯವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮನೆಯಲ್ಲಿದ್ದ 60 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ.