ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮಗಳ ಉಲ್ಲಂಘನೆ ದಂಡ ಪಾವತಿಗೆ 50% ಡಿಸ್ಕೌಂಟ್ ನೀಡಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 15 ದಿನದಲ್ಲಿ 45 ಕೋಟಿ ರೂ. ಗೂ ಹೆಚ್ಚಿನ ದಂಡ ಮೊತ್ತ ಪಾವತಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರು ಬಾರಿ ಸೀಟ್ ಬೆಲ್ಟ್ ಹಾಕದೆ ಸಂಚಾರ ನಿಯಮ ಉಲ್ಲಂಘಿಸಿದ್ದು, ೨,೫೦೦ ರೂ. ದಂಡ ಪಾವತಿಸಿದ್ದಾರೆ.
ವಾಹನ ಮಾಲೀಕರು 16,21,721 ಬಾಕಿ ಕೇಸ್‌ಗಳಿಗೆ 45.52 ಕೋಟಿ ರೂ. ದಂಡ ಪಾವತಿಸಿದ್ದಾರೆ. ಬೆಂಗಳೂರು ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ಸಂಚಾರಿ ಪೊಲೀಸರು ಶೇ ೫೦ ರಿಯಾಯಿತಿ ಪ್ರಕಟಿಸಿದ್ದರು. ರಿಯಾಯಿತಿಯೊಂದಿಗೆ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ಇದು ಅನ್ವಯಿಸುತ್ತದೆ.
ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ 50% ಮೊತ್ತವನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು.
ಹೈಕೋರ್ಟ್ ನ್ಯಾಯಾಧೀಶರು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಜೂನ್ 14ರಂದು ನಡೆದ ಸಭೆಯ ನಡವಳಿಗಳಲ್ಲಿ ಪೂಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡಲು ಕ್ರಮಕೈಗೊಳ್ಳುವಂತೆ ಕೋರಲಾಗಿತ್ತು. ಅದರಂತೆ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.