ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಪತ್ರ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದರೆ, ಬಿಜೆಪಿ ಏಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ ಎನ್ನುವ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು, “ಇದು ಕರ್ನಾಟಕ ಸರ್ಕಾರದ ತೀರ್ಮಾನ. ಇದರಿಂದ ಬಿಜೆಪಿಗೆ ಆತಂಕವೇಕೆ? ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಬಿಜೆಪಿ ಅವಧಿಯಲ್ಲಿ ಮಾಡಿರುವ ಕಾನೂನು ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಲು ನಾವು ತೀರ್ಮಾನಿಸಿದ್ದೇವೆ. ಈ ತೀರ್ಮಾನದಿಂದ ನಿಮಗೆ ಗಾಬರಿ ಯಾಕೆ? ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಯಾಕೆ ವರ್ತಿಸುತ್ತಿದ್ದೀರಿ. ನಾವು ಲೋಕಸಭೆ ಚುನಾವಣೆಗಳನ್ನು ಪರಿಶೀಲನೆ ಮಾಡಿದ್ದೇವೆ. ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸುವಂತೆ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತಿದ್ದೇವೆ. ಕೇಂದ್ರ ಚುನಾವಣಾ ಆಯೋಗ ಅವರ ತೀರ್ಮಾನದಂತೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸಲಿದೆ ಎಂದು ತಿಳಿಸಿದರು.
ಬಿಬಿಎಂಪಿ ಚುನಾವಣೆಯಲ್ಲೂ ಮತಪತ್ರ ಬಳಸುತ್ತೀರಾ ಎಂದು ಕೇಳಿದಾಗ, ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ತೀರ್ಮಾನ ಮಾಡಿದೆ ಎಂದು ತಿಳಿಸಿದರು.
ಜಿಬಿಐಟಿ ವಿಚಾರವಾಗಿ ರೈತರ ವಿರುದ್ಧ ನೀವು ಜೋರು ಧ್ವನಿಯಲ್ಲಿ ಮಾತನಾಡಿದ್ದೀರಿ ಎಂದು ಕೇಳಿದಾಗ, ಅವರು ನಮ್ಮ ಜನ. ನಮ್ಮ ರೈತರು. ನಮ್ಮ ಊರಿನವರು. ನನಗೆ ಹಕ್ಕಿದೆ. ಅವರು ಯಾವ ಪಕ್ಷದವರು, ಯಾವ ಬಾವುಟ ಹಾಕಿದ್ದರು ಎಂದು ನನಗೆ ಗೊತ್ತಿದೆ. ಈ ಯೋಜನೆಗೆ 82% ರೈತರು ತಮ್ಮ ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಉಳಿದ 18% ರೈತರು ಮಾತ್ರ ವಿರೋಧ ಮಾಡುತ್ತಿದ್ದಾರೆ. ನಮ್ಮ ರೈತರಿಗೆ ಅತ್ಯುತ್ತಮ ಪರಿಹಾರವನ್ನು ನೀಡಿದ್ದೇನೆ. ನಾನು ಇಡೀ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರ ರೂಪಿಸಬೇಕು. ಹೀಗಾಗಿ ಇದಕ್ಕಿಂತ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ. ಈ ಯೋಜನೆ ಬೇಡವಾಗಿದ್ದರೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ಅವರೇ ತಮ್ಮ ಸರ್ಕಾರದಲ್ಲಿ ಡಿನೋಟಿಫಿಕೇಷನ್ ಮಾಡಬಹುದಿತ್ತಲ್ಲವೇ. ಈ ಯೋಜನೆ ನೋಟಿಫಿಕೇಶನ್ ಮಾಡಿದ್ದು ನಾನಲ್ಲ, ಅವರು. ಸುಪ್ರೀಂ ಕೋರ್ಟಿನಲ್ಲಿ ಅಂತಿಮ ತೀರ್ಮಾನವಾಗುವವರೆಗೂ ನಾವು ಡಿನೋಟಿಫಿಕೇಷನ್ ಮಾಡಲು ಆಗುವುದಿಲ್ಲ. ಅವರು ಕೋರ್ಟ್ ನಿಂದ ಏನಾದರೂ ಮಾಡಿಕೊಂಡು ಬರಲಿ ಎಂದು ತಿಳಿಸಿದರು.
ಎಲ್ಲಾ ಪಕ್ಷದವರ ಮೇಲಿನ ಪ್ರಕರಣ ರದ್ದುಗೊಳಿಸಿದ್ದೇವೆ
ತಮ್ಮ ಬೆಂಬಲಿಗರ ಮೇಲಿನ ಕೇಸ್ ರದ್ದುಗೊಳಿಸುವ ತೀರ್ಮಾನದ ಬಗ್ಗೆ ಕೇಳಿದಾಗ, ನಾವು ಬಿಜೆಪಿ ಹಾಗೂ ಕಾಂಗ್ರೆಸಿಗರ ಮೇಲಿದ್ದ ಅನೇಕ ಕೇಸ್ ರದ್ದುಗೊಳಿಸಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಬೆಂಬಲಿಗರ ಮೇಲೆ ಬಲವಂತವಾಗಿ ಹಾಕಿದ್ದ ಪ್ರಕರಣಗಳನ್ನು ರದ್ದುಗೊಳಿಸಿದ್ದೇವೆ. ಕೋವಿಡ್ ಸಮಯದಲ್ಲಿ ನನ್ನ ಹಾಗೂ ಸಿಎಂ ವಿರುದ್ಧ ಕೇಸ್ ಹಾಕಿದ್ದರು. ರಾಜ್ಯ, ರೈತರು, ಭಾಷೆಗಾಗಿ ಮಾಡಿರುವ ಪ್ರತಿಭಟನೆ ಮಾಡಿದವರ ಮೇಲೆ ಹಾಕಿರುವ ಕೇಸ್ ಹಿಂಪಡೆದಿದ್ದೇವೆ. ನಾನು ಬಂಧನವಾಗಿದ್ದ ಇಡಿ ಪ್ರಕರಣ ವಜಾಗೊಂಡಿದೆ. ನನಗೆ ಆಗಿರುವ ಅನ್ಯಾಯ ಸರಿ ಮಾಡುವವರು ಯಾರು? ನಾನು ಜೈಲಿಂದ ಬಿಡುಗಡೆಯಾದ ಬಳಿಕ ಭವ್ಯ ಸ್ವಾಗತಿ ಸಿಕ್ಕಿತು ಎಂದು ಬಹಳ ದೊಡ್ಡ ಚಿಂತಕರು, ಭಾಷಣಕಾರರು ಮಾತನಾಡಿದ್ದರಲ್ಲ, ನನ್ನ ಪ್ರಕರಣ ವಜಾಗೊಳಿಸಿದ ನಂತರ ಏಕೆ ಅಭಿನಂದಿಸಲಿಲ್ಲ? ಈ ವಿಚಾರವಾಗಿ ಹೆಚ್ಚಿನ ಚರ್ಚೆ ಬೇಡ. ನಾವು ರೈತ ಸಂಘ, ಬಿಜೆಪಿ, ಚಳುವಳಿಗಾರರ ಮನವಿಯನ್ನು ಸ್ವೀಕರಿಸಿ ಎಲ್ಲಾ ಪಕ್ಷದವರ ಮೇಲಿದ್ದ ಕೇಸ್ ರದ್ದುಗೊಳಿಸಿದ್ದೇವೆ ಎಂದರು.