ಸ್ಕಿಲ್ ಇಂಡಿಯಾದಲ್ಲಿ ಶೇ ೯೩ ಅಕೌಂಟ್ ನಕಲಿ ಇವೆ. ಈ ಬಗೆ ಬಿಜೆಪಿಯ ಯಾವ ಸಚಿವರೂ ಮಾತನಾಡಲ್ಲ. ಯಾರನ್ನು ಕೇಳಬೇಕು ಎಂಬುದೇ ಇಲ್ಲ. ಪ್ರಶ್ನೆ ಕೇಳಲು ಯಾರು ಇಲ್ಲ. ಅವರೇ ಪ್ರಶ್ನೆ ಅವರೇ ಉತ್ತರ. ಮಾಧ್ಯಮದವರನ್ನೂ ಕೇಳಲು ಬಿಡಲ್ಲ. ಮಾತೆತ್ತಿದರೆ ಕೃತಕ ಬುದ್ಧಿಮತ್ತೆ ಬಗ್ಗೆ ಮಾತನಾಡೋ ಬಿಜೆಪಿಯವರಿಗೆ ಎಐ ಬಗ್ಗೆಯೇ ತಿಳಿವಳಿಕೆ ಇಲ್ಲ. ಕಳೆದ ಹನ್ನೊಂದು ವರ್ಷಗಳಲ್ಲಿ ಕೆಂದ್ರದ ಒಬ್ಬ ಸಚಿವರೂ ಯಾವುದೇ ಯೋಜನೆ ಬಗ್ಗೆ ಮಾಧ್ಯಮ ಗೋಷ್ಠಿ ಮಾಡಿಲ್ಲ. ಇನ್ನು ಪ್ರಧಾನಿ ಮೋದಿ ಅವರನ್ನು ಬಿಡಿ. ಜಿ ರಾಮ್ ಜಿ ಬಗ್ಗೆ ವಿವರವಾಗಿ ದೇಶದ ಜನಕ್ಕೆ ತಿಳಿಸಿಲ್ಲ. ಬುದ್ಧಿವಂತರ ರೀತಿ ಮಾತನಾಡುತ್ತಾರೆ. ಇವರು ಎಂದೂ ಪಾಲಿಸಿ, ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಲಾಡ್, ಮನರೇಗಾ ರದ್ದು ವಿರುದ್ಧ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಆಂದೋಲನ ನಡೆಸಲಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ತಿಳಿವಳಿಕೆ ನೀಡುತ್ತೇವೆ. ಸರ್ಕಾರ ಮತ್ತು ಪಕ್ಷ ಸಾರ್ವಜನಿಕವಾಗಿ ಅರಿವು ಮೂಡಿಸಲು ಯೋಜನೆ ರೂಪಿಸುತ್ತೆ. ಮನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ಜಾರಿ ಮಾಡಿರುವುದು ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಮತ್ತು ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಎಂದರು.
ಮನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ಜಾರಿ ಮಾಡಿ ದೇಶದ ಹಳ್ಳಿಯ ಬಡಜನರಿಗೆ ತೊಂದರೆ ಮಾಡಿದೆ. ಅವರಿಗೆ ಅನಾನುಕೂಲ ಮಾಡಿದೆ. ದೊಡ್ಡ ಉದ್ದಿಮೆದಾರರಿಗೆ ಕಾಂಟ್ರಾಕ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಮಾಡಿರುವ ಪ್ಲಾನ್ ಆಗಿದೆ. ಗ್ರಾಮ ಪಂಚಾಯಿತಿ ಪಿಡಿಒ ಗಳು ಮಾಡುವ ಕೆಲಸವನ್ನು ಎಐ ಬಳಸಿ ಕೇಂದ್ರ ಸರ್ಕಾರ ಮಾಡುವುದೆಂದರೆ ಗ್ರಾಮ ಪಂಚಾಯಿತಿ ಅಧಿಕಾರ ಕಸಿದಂತೆ. ಸೆಟಲೈಟ್ ಬಳಸಿ ರಸ್ತೆ ಮಾಡ್ತೀವಿ ಅನ್ನೋದು ಹಾಸ್ಯಸ್ಪದ. ತರಾತುರಿಯಲ್ಲಿ ಯೋಜನೆ ಹೆಸರು ಬದಲಾಯಿಸಿದರು. ಗಾಂಧಿ ಅವರ ಹೆಸರು ಬದಲಾಯಿಸಿ ಪಿಚ್ಚರ್ ಓಡಿಸುತ್ತಾ ಇದ್ದಾರೆ ಎಂದು ಹೇಳಿದರು.
ಮನರೇಗಾ ಬದಲಾಯಿಸಿರುವುದನ್ನು ದೇಶದಾದ್ಯಂತ ಪಕ್ಷಾತೀತವಾಗಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜಾಬ್ ಕಾರ್ಡ್ ದಾರರು ವಿರೋಧಿಸಿ ಆಕ್ರೋಶವ್ಯಕ್ತಪಡಿಸಬೇಕು. ಪ್ರತಿಭಟನೆ ನಡೆಸಬೇಕು ಎಂದು ಆಗ್ರಹಿಸಿದರು. ಗಾಂಧಿ ಕುರಿತು ಬಿಜೆಪಿಯವರಿಗೆ ಗೌರವ ಮತ್ತು ಪ್ರೀತಿ ಇಲ್ಲ. ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಹಾಕುತ್ತಾರೆ. ಬಾಪು ಹಾಗೂ ಚರಕದ ಫೋಟೊ ಹಿಡಿದು ಪೋಸ್ ಕೊಡೊದು ಆರ್‌ಎಸ್‌ಎಸ್ ಅಜೆಂಡಾ. ದೇಶದ ಜಾತ್ಯತೀತತೆ ಕುರಿತು ಅವರು ನಂಬೋದಿಲ್ಲ ಎಂದರು.
ಮನರೇಗಾ ಬದಲಾಯಿಸಿರುವುದರಿಂದ ದೇಶದ ೨೬ ಕೋಟಿಗೂ ಹೆಚ್ಚು ನರೇಗಾ ಕಾರ್ಮಿಕರಿಗೆ ದೊಡ್ಡ ಪ್ರಮಾಣದಲ್ಲಿ ಅನಾನುಕೂಲ ಆಗಲಿದೆ. ಇದರಲ್ಲಿ ಕನಿಷ್ಠ ವೇತನದ ಬಗ್ಗೆ ಮಾಹಿತಿ ಇಲ್ಲ. ಎಲ್ಲವನ್ನೂ ಗೊಂದಲ ಮಾಡಲಾಗಿದೆ. ಮನರೇಗಾ ಯೋಜನೆ ಉಳಿಸಲು ಸರ್ಕಾರ ಚಿಂತನೆ ಮಾಡ್ತ ಇದೆ. ಜಿ ರಾಮ್ ಜಿ ಬಗ್ಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೂ ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ಬಳ್ಳಾರಿಯಲ್ಲಿ ಇತ್ತೀಚೆಗೆ ಗಲಭೆ ನಡೆದಿರುವುದು ದುಃಖದ ಸಂಗತಿ. ಎಸ್‌ಪಿ ಅಮಾನತು ಸಂಬಂಧ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ. ಅವರು ಮುಂಜಾಗ್ರತೆ ವಹಿಸಬೇಕಿತ್ತು. ನಿರ್ಲಕ್ಷ್ಯ ವಹಿಸಿದ್ದರೆ ಸರಿ ಅಲ್ಲ ಎಂದು ಲಾಡ್ ಹೇಳಿದರು.


