ಬಳ್ಳಾರಿ: ಬರೋಬರಿ 67 ವರ್ಷಗಳ ಬಳಿಕ ನಗರದಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಡಿಸೆಂಬರ್ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಳ್ಳಾರಿ ಕನ್ನಡದ ಅಸ್ಮಿತೆ ತೋರಿದ ಜಿಲ್ಲೆಯಾಗಿದೆ. ಸಾಂಸ್ಕೃತಿಕವಾಗಿ ಬಳ್ಳಾರಿ ಮತ್ತು ವಿಜಯನಗರ ಒಂದೇ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಈವರೆಗೆ ನಾಲ್ಕು ಬಾರಿ ಸಾಹಿತ್ಯ ಸಮ್ಮೇಳನ ನಡೆದಿದೆ.
ಹೊಸಪೇಟೆಯಲ್ಲಿ 1920ರಲ್ಲಿ ಆರನೇ ಸಾಹಿತ್ಯ ಸಮ್ಮೇಳನ, 1926 ರಲ್ಲಿ 12ನೇ, 1947ರಲ್ಲಿ 30ನೇ ಮತ್ತು 1958ರಲ್ಲಿ 50ನೇ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ಇದೀಗ ಸುದೀರ್ಘ 67 ವರ್ಷದ ಬಳಿಕ 88ನೇ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಬಳ್ಳಾರಿಯಲ್ಲಿ ಕೋಟೆ, ಬಿಸಿಲು, ಗಣಿ, ಗಡಿ ಇರುವಂತಹದ್ದು. ಹೀಗಾಗಿ ಡಿಸೆಂಬರ್ನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಲಾಗಿದೆ. ಈ ಬಾರಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ವಿದೇಶದಲ್ಲಿನ ಕನ್ನಡಿಗರನ್ನು ಆಹ್ವಾನಿಸಲಾಗಿದ್ದು, ಕನ್ನಡದಲ್ಲಿ ಆಡಳಿತ ನಡೆಸಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಬಳ್ಳಾರಿ ಮೊದಲ ಜಿಲ್ಲಾಧಿಕಾರಿ ಥಾಮಸ್ ಮನ್ರೋ ಅವರ ಕುಟುಂಬದವರನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು,ಅವರ ಕುಟುಂಬದವರನ್ನು ಆಹ್ವಾನಿಸಿ ಗೌರವಿಸಲಾಗುವುದು ಎಂದರು.
ಸಮ್ಮೇಳನ ಅತ್ಯಂತ ಯಶಸ್ವಿ ಮತ್ತು ಮುಂದಿನ ಸಮ್ಮೇಳನಕ್ಕೆ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಅಚ್ಚುಕಟ್ಟಾಗಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಕನ್ನಡಕ್ಕೆ ಧರ್ಮ, ಜಾತಿಯಿಲ್ಲ. ಹನುಮಂತ ಜನಿಸಿದ ನಾಡು, ಹನುಮಂತನಿಗೆ ಜಾತಿಯಿಲ್ಲ. ಎಲ್ಲ ಜಾತಿಯವರು ಪೂಜಿಸುತ್ತಾರೆ. ಎಲ್ಲರೂ ಸೇರಿ ಕನ್ನಡದ ತೇರು ಎಳೆಯೋಣ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ, ಜಿಲ್ಲಾಡಳಿತದ ಸಹಕಾರದಿಂದ ಈ ಸಮ್ಮೇಳನ ಹೊಸ ದಾಖಲೆಯಾಗಬೇಕು ಮತ್ತು ಜೊತೆಗೆ ಕನ್ನಡದ ಸಮಸ್ಯೆಗಳಿಗೆ ಪರಿಹಾರ ಸಿಗುವ ನಂಬಿಕೆ ಇದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಶೋಭಾ ರಾಣಿ ಉಪಸ್ಥಿತರಿದ್ದರು.