Menu

ಲಕ್ಕುಂಡಿಯ ಮತ್ತೆ 8 ತಾಣ ಸಂರಕ್ಷಿತ ಸ್ಮಾರಕ: ಸಚಿವ ಎಚ್‌ಕೆ ಪಾಟೀಲ

ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಇನ್ನು 8 ದೇವಸ್ಥಾನ ಭಾವಿಗಳನ್ನು ಫೆಬ್ರವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ರಾಜ್ಯ ಸರ್ಕಾರ ದಿಂದ ಘೋಷಣೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ  ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.  ಲಕ್ಕುಂಡಿಯ ಇನ್ನು 20 ದೇವಸ್ಥಾನ, ಬಾವಿಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಒಂದು ತಿಂಗಳ ಒಳಗಾಗಿ ಸಮಗ್ರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಲಾಗಿದೆ. ಇದರಿಂದಾಗಿ ಲಕ್ಕುಂಡಿಯ ಒಟ್ಟು 44 ತಾಣಗಳು ಸರ್ಕಾರದ ನೇರ ಉಸ್ತುವಾರಿಗೆ ಒಳಪಡಲಿದ್ದು, ಇವುಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದರು.

ಲಕ್ಕುಂಡಿಯ ಆಯ್ದ 5 ದೇವಸ್ಥಾನಗಳು ಮತ್ತು 1 ಪ್ರಾಚೀನ ಬಾವಿಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿ ತಿಂಗಳಲ್ಲಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಮಣ್ಣಿನಡಿಯಲ್ಲಿ ಸ್ಪಷ್ಟವಾಗಿ ಕಾಣದ ದೇವಸ್ಥಾನಗಳನ್ನು ಗುರುತಿಸಿ ಮಾರ್ಚ್ ಒಳಗೆ ಮರುಜೀವ ನೀಡಲು ವಿಶೇಷ ಉತ್ಖನನ ನಡೆಸಲಾಗುವುದು. ಅದಕ್ಕೆ ಜನರ ಸಹಕಾರ ಅಗತ್ಯವಿದ್ದು, ಕೆಲವರಿಗೆ ಪರಿಹಾರ ಕೊಟ್ಟು, ಇಲ್ಲವೇ ಮನವೊಲಿಸಿ ಐತಿಹಾಸಿಕ ತಾಣಗಳನ್ನು ಸರಕಾರಕ್ಕೆ ಕೊಡಬೇಕು ಎಂದು ಜನರಲ್ಲಿ ವಿನಂತಿ ಮಾಡಿಕೊಳ್ಳುವೆ ಎಂದರು.

ಲಕ್ಕುಂಡಿಯ ಕಲಾ ವೈಭವವನ್ನು ಅಧ್ಯಯನ ಮಾಡಲು ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ 165 ಲಕ್ಷ ರೂ. ಬಿಡುಗಡೆಯಾಗಿದೆ. ಗಣರಾಜ್ಯೋತ್ಸವದ ಒಳಗೆ ಜಮೀನು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ, ಟೆಂಡರ್ ಕರೆಯಲು ಸೂಚಿಸಲಾ ಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಸಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

ಇತ್ತೀಚೆಗೆ ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರಿಗೆ ಸರ್ಕಾರದಿಂದ ಉದ್ಯೋಗ ಮತ್ತು ಮನೆ ನೀಡುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾದ ಅಧಿಕೃತ ಆದೇಶದ ಪತ್ರಗಳನ್ನು ಗಣರಾಜ್ಯೋತ್ಸವದಂದೇ ಹಸ್ತಾಂತರಿಸಲಾಗುವುದು ಎಂದರು.

ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ, ನಿಧಿಯ ಕಾಲಘಟ್ಟವನ್ನು ನಿರ್ಣಯಿಸಿ ಪ್ರೋತ್ಸಾಹ ಧನ ನೀಡಲಾಗುವುದು. ಸಿಕ್ಕಿರುವ ನಿಧಿಯ ಕಾಲಘಟ್ಟವನ್ನು ನಿರ್ಧರಿಸಲು ತಾಂತ್ರಿಕ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ. ಅದರ ಸೂಚನೆ ಮೇರೆಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲ ತಿಳಿಸಿದರು.

ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಲಹಾ ಸಮಿತಿಯ ಸದಸ್ಯ ಸಿದ್ದು ಪಾಟೀಲ, ಅ ದ ಕಟ್ಟಿಮನಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಡಾ. ಶರಣು‌ ಗೊಗೇರಿ, ಲಕ್ಕುಂಡಿ ಗ್ರಾ ಪಂ ಅಧ್ಯಕ್ಷ ಕೆಂಚಪ್ಪ ಪೂಜಾರ, ಅಧಿಕಾರಿಗಳಾದ ಗಂಗಪ್ಪ ಎಂ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ತೇಜಶ್ವರ, ಮಲ್ಲಯ್ಯ ಕೆ, ಅಮೀರ್ ನಾಯ್ಕ, ಸೇರಿದಂತೆ ಇತರರು ಇದ್ದರು.

Related Posts

Leave a Reply

Your email address will not be published. Required fields are marked *