Menu

79ನೇ ಸ್ವಾತಂತ್ರ್ಯ ದಿನಾಚರಣೆ ಐತಿಹಾಸಿಕ ಭಾವಪೂರ್ಣ ಕ್ಷಣ

ಭಾರತೀಯರೆಲ್ಲರೂ ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆಯನ್ನು ಬಹಳ ಸಂಭ್ರಮ, ಸಡಗರದಿಂದ ದೇಶದಾದ್ಯಂತ ಆಚರಿಸಿದ್ದೇವೆ. ರಾಷ್ಟ್ರ ಧ್ವಜವು ಭಾರತೀಯರ ಸ್ವಾಭಿಮಾನ ಹಾಗೂ ದೇಶದ ಪರಂಪರೆಯ ಸಂಕೇತ. ಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ವಿಶೇಷ ಅಭಿಯಾನ ’ಹರ್ ಘರ್ ತಿರಂಗ’ ಎಂಬ ಕಾರ್ಯಕ್ರಮದ ಭಾಗವಾಗಿ ಈ ವರ್ಷವೂ ಪ್ರತಿಯೊಬ್ಬ ಭಾರತೀಯನೂ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಆಗಸ್ಟ್ ೧೩ ರಿಂದ ೧೫ ರವರೆಗೆ ಹಾರಿಸಿ ರಾಷ್ಟ್ರದ ಸಾರ್ವಭೌಮತೆಯನ್ನು, ಏಕತೆಯನ್ನು ಸಾರಬೇಕಿದೆ.
ದಾಸ್ಯದ ಸಂಕೋಲೆಯಾದ ಸುಮಾರು ೩೦೦ ವರ್ಷಗಳ ಕಾಲ ಭಾರತೀಯರನ್ನು ಗುಲಾಮರಂತೆ ನಡೆಸಿಕೊಂಡ ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಲು ಮಾಡಿದ ಅವಿರತ ಹೋರಾಟ, ಕೂಗಿದ ಘೋಷಣೆಗಳನ್ನು ಕೇಳಿದಾಗ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಹೊಸ ಚೈತನ್ಯ ನವಿರೇಳುವಂತೆ ಮಾಡಿತು.
 ಜೈಹಿಂದ್’ – ಸುಭಾಷ್ ಚಂದ್ರ ಬೋಸ್
 ’ವಂದೇಮಾತರಂ’ – ಬಂಕಿಮಚಂದ್ರ ಚಟರ್ಜಿ
 ’ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಇದನ್ನು ನಾನು ಪಡೆದೇ ತೀರುತ್ತೇನೆ.’ – ಬಾಲಗಂಗಾಧರ ತಿಲಕ್
 ’ಜೈ ಜವಾನ್, ಜೈ ಕಿಸಾನ್’ – ಲಾಲ್ ಬಹದ್ದೂರ್ ಶಾಸ್ತ್ರಿ
 ’ಸತ್ಯಮೇವ ಜಯತೇ’ – ಪಂಡಿತ್ ಮದನ್ ಮೋಹನ್ ಮಾಳವೀಯ.
 ’ಇಂಕ್ವಿಲಾಬ್ ಜಿಂದಾಬಾದ್’ – ಹಸ್ರತ್ ಮೋಹನಿ
 ’ನೀವು ನನಗೆ ರಕ್ತ ನೀಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ.’ – ಸುಭಾಷ್ ಚಂದ್ರ ಬೋಸ್.
 ’ಆರಾಮವಾಗಿರುವುದು ತುಂಬಾ ಕೆಟ್ಟದು.’ – ಪಂಡಿತ್ ಜವಾಹರಲಾಲ್ ನೆಹರು
 ’ಮಾಡು ಇಲ್ಲವೆ ಮಡಿ.’ – ಮಹಾತ್ಮ ಗಾಂಧಿ
ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಮಾನವ ಸಂಪನ್ಮೂಲ ಹೊಂದಿದ ಪ್ರಜಾಪ್ರಭುತ್ವ ರಾಷ್ಟ್ರ. ೧೯೪೭ ರ ಆಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಗಳಿಸಿದ್ದು ಭಾರತದ ಸಾಧನೆಯಾಗಿದ್ದು ವಿಶ್ವದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಇದನ್ನು ’ರಕ್ತ ರಹಿತ ಕ್ರಾಂತಿ’ ಎಂದು ಕರೆಯಬಹುದು. ಆದರೆ ಸ್ವಾತಂತ್ರ್ಯದ ನಂತರ ಭಾರತವು ಅನಕ್ಷರತೆ, ಭ್ರಷ್ಟಾಚಾರ, ಅಸ್ಪೃಶ್ಯತೆ, ಬಡತನ, ಲಿಂಗ ತಾರತಮ್ಯತೆ, ಮಹಿಳೆಯರ ಸ್ಥಾನಮಾನ, ಪ್ರಾದೇಶಿಕತೆ, ಕೋಮುವಾದ ಮುಂತಾದ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಭಾರತ ಪ್ರಸ್ತುತ ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ಶ್ರೀಮಂತ ರಾಷ್ಟ್ರವಾಗಿದೆ. ಬ್ರಿಟನ್ ದೇಶವನ್ನು ಹಿಂದಿಕ್ಕಿ ೫ ನೇ ಸ್ಥಾನ ಪಡೆದಿದೆ.  ೨೦೩೦ ರ ವೇಳೆಗೆ ದೇಶ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರ ಆಗಲಿದೆ ಎಂದು ಅಧ್ಯಯನಗಳು ಅಂದಾಜು ಮಾಡಿವೆ.
ಈ ಐತಿಹಾಸಿಕ ಕ್ಷಣಗಳನ್ನು ಸ್ಮರಣೀಯವಾಗಿಸುವುದು ಮಾತ್ರವಲ್ಲದೆ, ದೇಶದ ಹೆಮ್ಮೆಯ ಪ್ರಧಾನಿ  ಶ್ರೀ ನರೇಂದ್ರ ಮೋದಿಯವರು ’ಆಜಾದಿ ಕಾ ಅಮೃತ ಮಹೋತ್ಸವ’ ಕ್ಕೆ ಚಾಲನೆ ನೀಡಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯ ಸ್ಫೂರ್ತಿ ತುಂಬುವ ಗುರಿ ಇರಿಸಿಕೊಂಡಿದ್ದಾರೆ. ಉಪ್ಪಿನ ಸತ್ಯಾಗ್ರಹ, ದಂಡಿ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಹೋರಾಟದ ಅದ್ಭುತ ಘಟನೆಗಳು.
ಅಮೃತ ಮಹೋತ್ಸವ ಆಚರಣೆ ರಾಷ್ಟ್ರೀಯ ಜಾಗೃತಿಗೆ ಒಳ್ಳೆಯ ಮುನ್ನುಡಿ ಬರೆಯುತ್ತಿದೆ. ಅಮೃತ ಮಹೋತ್ಸವದ ಅಂಗವಾಗಿ ದೇಶದ ೭೫ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟದ ೭೫ ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಿಂದ ಮರೆತು ಹೋದ ಹಲವಾರು ಕ್ಷಣಗಳನ್ನು ರಾಷ್ಟ್ರದ ಮುಂದೆ ಅನಾವರಣಗೊಳಿಸುತ್ತದೆ.
ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ 
ನಮ್ಮ ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೆ ಇರಲಿ, ನಾವು ಒಂದು
ನಾವು ಭಾರತೀಯರು
ಎಂಬ ಭಾರತೀಯರ ಏಕತೆಯನ್ನು ಕುರಿತು ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಅಭಿಮಾನದಿಂದ ಹೇಳಿದ್ದಾರೆ.
ಸ್ವತಂತ್ರ ಭಾರತದ ಹೊಸ ಮೈಲುಗಲ್ಲುಗಳು
ಭಾರತೀಯ ಸಂವಿಧಾನ : ಭಾರತ ದೇಶವು ಜನವರಿ ೨೬, ೧೯೫೦ ರಂದು ಪ್ರತ್ಯೇಕ ಸಂವಿಧಾನವನ್ನು ಹೊಂದಿ ಮೂಲಭೂತ ರಾಜಕೀಯ ಸಂಹಿತೆ, ಹಕ್ಕುಗಳು ಮತ್ತು ನಾಗರಿಕರ ಕರ್ತವ್ಯಗಳನ್ನು ತಿಳಿಸಿದೆ. ನಮ್ಮ ಸಂವಿಧಾನವು ನಮಗೆ ವಿಶ್ವದ ಅತಿ ದೊಡ್ಡ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಬಿರುದನ್ನು ಪಡೆದಿದೆ.
ಹಸಿರು ಕ್ರಾಂತಿ :- ಹಸಿರು ಕ್ರಾಂತಿಯನ್ನು ೧೯೬೭ ರಲ್ಲಿ ಪರಿಚಯಿಸಲಾಯಿತು. ಕೃಷಿ ರಾಷ್ಟ್ರವಾಗಿದ್ದರೂ, ಭಾರತವು ಆಹಾರದ ಕೊರತೆಯನ್ನು ಈ ಹಿಂದೆ ಹೊಂದಿತ್ತು. ಹಸಿರು ಕ್ರಾಂತಿಯು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಿತು.
ಪೋಲಿಯೊ ನಿರ್ಮೂಲನೆ :- ೧೯೯೪ ರಲ್ಲಿ ವಿಶ್ವದ ಪೋಲಿಯೊ ಪ್ರಕರಣಗಳಲ್ಲಿ ಭಾರತವು ೬೦% ರಷ್ಟು ಭಾಗವನ್ನು ಹೊಂದಿತ್ತು. ಎರಡು ದಶಕಗಳಲ್ಲಿ ಭಾರತವು ೨೦೧೪ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ’ಪೋಲಿಯೊ ಮುಕ್ತ ಪ್ರಮಾಣ ಪತ್ರ’ ನೀಡಿದೆ.
ಬಾಹ್ಯಾಕಾಶ ಮತ್ತು ತಂತ್ರಜ್ಞಾನ :- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯನ್ನು ೧೫ ಆಗಸ್ಟ್ ೧೯೬೯ ರಲ್ಲಿ ಸ್ಥಾಪಿಸಲಾಯಿತು. ಇದು ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಹೊಸ ಅವಕಾಶವಾಯಿತು. ೧೯೭೫ ರಲ್ಲಿ ಭಾರತವು ತನ್ನ ಮೊದಲ ಬಾಹ್ಯಾಕಾಶ ಉಪಗ್ರಹ ’ಆರ್ಯಭಟ’ ಅನ್ನು ಉಡಾಯಿಸಿತು. ರಾಕೇಶ್ ಶರ್ಮಾ ಅವರು ೧೯೮೬ ರಲ್ಲಿ ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತೀಯ ’ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಅಡಿಯಲ್ಲಿ ಅತ್ಯುತ್ತಮ ಸ್ವದೇಶ ತಂತ್ರಜ್ಞಾನ ಆಧಾರಿತ ಉಡಾವಣಾ ವಾಹನಗಳನ್ನು ತಯಾರಿಸಲಾಯಿತು.
ಶಿಕ್ಷಣದ ಹಕ್ಕು :- ಶಿಕ್ಷಣವು ಭಾರತದ ಅಭಿವೃದ್ಧಿಯ ನಿರ್ಣಾಯಕ ಭಾಗವಾಗಿದೆ. ಶಿಕ್ಷಣ ಹಕ್ಕು ಕಾಯಿದೆ, ೨೦೧೦ ರಲ್ಲಿ ಶಿಕ್ಷಣವನ್ನು ಪ್ರತಿ ಮಗುವಿನ ಮೂಲಭೂತ ಹಕ್ಕು ಎಂದು ಘೋಷಿಸಲಾಗಿದೆ.  ೬ ರಿಂದ ೧೪ ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ :- ಭಾರತದ ವಿದ್ಯಾರ್ಥಿಗಳಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಭಾರತ ಸರ್ಕಾರವು ರೂಪಿಸಿದ ಯೋಜನೆಯ ಅನುಷ್ಠಾನ.
ಶಕ್ತಿಶಾಲಿ ರಾಷ್ಟ್ರ :- ಭಾರತ ಸ್ವಾತಂತ್ರ್ಯದ ನಂತರ ಭಾರತವು ತನ್ನ ರಕ್ಷಣೆಯನ್ನು ಬಲಪಡಿಸಿತು. ೧೯೫೪ ರಲ್ಲಿ ಭಾರತವು ಪರಮಾಣು ಶಕ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ೧೯೭೪ ರಲ್ಲಿ ಭಾರತವು ’ಸ್ಮೈಲಿಂಗ್ ಬುದ್ಧ’ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿತು. ಇಂದು ಭಾರತವು ವಿಶ್ವದ    ೨ ನೇ ಅತಿ ದೊಡ್ಡ ಮಿಲಿಟರಿ ಮತ್ತು ಅತಿ ದೊಡ್ಡ ಸ್ವಯಂ ಸೇವಾ ಸೇನೆಯನ್ನು ಹೊಂದಿದೆ.
ಲಿಂಗ ಅಸಮಾನತೆ ನಿವಾರಣೆ :- ಲಿಂಗ ಸಮಾನತೆಯನ್ನು ಉತ್ತೇಜಿಸಲು ವರದಕ್ಷಿಣೆ ನಿಷೇಧ ಕಾಯಿದೆ, ಕೌಟುಂಬಿಕ ದೌರ್ಜನ್ಯ ಕಾಯಿದೆ, ’ಬೇಟಿ ಬಚಾವೋ ಬೇಟಿ ಪಡಾವೋ’ ನಂತಹ ಅನೇಕ ಸರ್ಕಾರಿ ಕಾರ್ಯಕ್ರಮಗಳು ದೇಶದಲ್ಲಿ ಲಿಂಗ ತಾರತಮ್ಯತೆಯನ್ನು ಹೋಗಲಾಡಿಸಲು ಸಾಧ್ಯವಾಗಿಸಿದೆ.
೧೯೫೧ ರಲ್ಲಿ ತಂತ್ರಜ್ಞಾನ ಪ್ರಗತಿಗೆ ತಂತ್ರಜ್ಞಾನ ಶಿಕ್ಷಣವೇ ಅಡಿಗಲ್ಲು. ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಮೊದಲ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪನೆಯಾಯಿತು.
೧೯೫೪ ರಲ್ಲಿ ಅಣುಶಕ್ತಿ ಸಂಶೋಧನೆಗೆ ಟ್ರಾಂಬೆಯಲ್ಲಿ ಅಧ್ಯಯನ ಸಂಸ್ಥೆ ಆರಂಭ. ೧೯೬೭ ರಲ್ಲಿ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಎಂದು ನಾಮಕರಣ. 
೧೯೫೮ ರಲ್ಲಿ ಸೇನಾ ಶಕ್ತಿಗೆ ಬಲ ತುಂಬಲು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್ (ಆಖಆಔ) ಗೆ ಚಾಲನೆ ನೀಡಲಾಯಿತು.
೧೯೫೯ ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಿಂದ ಖಿIಈಖ ಆಟೋಮ್ಯಾಟಿಕ್ ಕಂಪ್ಯೂಟರ್ ಎಂಬ ದೇಶದ ಮೊದಲ ಡಿಜಿಟಲ್ ಕಂಪ್ಯೂಟರ್ ನಿರ್ಮಾಣ.
೧೯೬೮ ರಲ್ಲಿ ಭಾರತದ ಮೊದಲ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರಾರಂಭಿಸಲಾಯಿತು.
೧೯೬೯ ರಲ್ಲಿ ಬಾಹ್ಯಾಕಾಶ ವಿಜ್ಞಾನ ಅಧ್ಯಯನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಇಸ್ರೋ ಹುಟ್ಟಿಕೊಂಡಿತು.
೧೯೭೪ ರಲ್ಲಿ ಜಗತ್ತಿನ ಮುಂದೆ ಭಾರತದ ಶಕ್ತಿ ಪ್ರದರ್ಶನಕ್ಕಾಗಿ ರಾಜಸ್ಥಾನದ ಪೋಕ್ರಾನ್‌ನಲ್ಲಿ ಮೊದಲ ಅಣು ಬಾಂಬ್ ಪರೀಕ್ಷೆ ನಡೆಸಲಾಯಿತು.
೧೯೮೧ ರಲ್ಲಿ ಕರ್ನಾಟಕದ ಕಣ್ಮಣಿ, ಜಾಗತಿಕ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಹುಟ್ಟು. 
೧೯೮೩ ರಲ್ಲಿ ಬಾಹ್ಯಾಕಾಶದ ಮಹತ್ವಾಕಾಂಕ್ಷಿ ಯೋಜನೆ ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಮ್‌ಗೆ ಚಾಲನೆ ನೀಡಲಾಯಿತು.
೧೯೮೪ ರಲ್ಲಿ ಬಾಹ್ಯಾಕಾಶಕ್ಕೆ ಭಾರತೀಯನ ಮೊದಲ ಹಾರಾಟ. ಮೊದಲ ಗಗನ ಯಾತ್ರಿ ರಾಕೇಶ್ ಶರ್ಮಾ.
೧೯೯೧ ರಲ್ಲಿ ಭಾರತದ ಮೊದಲ ಸ್ವದೇಶಿ ನಿರ್ಮಿತ ಸೂಪರ್ ಕಂಪ್ಯೂಟರ್  ಅನಾವರಣ.
ನಮ್ಮ ವಿಜ್ಞಾನಿಗಳ ಪ್ರಯತ್ನದಿಂದಾಗಿ ನಾವು ಎರಡು ಮೇಕ್ ಇನ್ ಇಂಡಿಯಾ ಕೋವಿಡ್ ಲಸಿಕೆಗಳನ್ನು (ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್) ಅಭಿವೃದ್ಧಿಪಡಿಸಿದ್ದು ಮತ್ತು ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ಕೈಗೊಳ್ಳುವ ಮೂಲಕ ದೇಶದ ಎಲ್ಲಾ ಪ್ರಜೆಗಳಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಿದುದು ಒಂದು ಐತಿಹಾಸಿಕ ಸಾಧನೆಯೇ ಸರಿ.
ಆಯುಷ್ಮಾನ್ ಭಾರತ್ ಯೋಜನೆ :- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ ೨೦೧೮ ರಲ್ಲಿ ಆರಂಭಿಸಿದರು. ಇದು ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ರಕ್ಷಣೆ ಯೋಜನೆಯಾಗಿದೆ. ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ೫ ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುವ ಯೋಜನೆ ಇದಾಗಿದೆ.
 ಸುಕನ್ಯಾ ಸಮೃದ್ಧಿ ಯೋಜನೆ :- ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ’ಬೇಟಿ ಬಚಾವೋ ಬೇಟಿ ಪಡಾವೋ’ ಆಶಯದಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಾಯವಾಗಲಿದೆ.
ಪ್ರಧಾನ ಮಂತ್ರಿ ಜನಧನ ಯೋಜನೆ :- ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಬೇಕೆಂಬ ಮಹಾನ್ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಇದಾಗಿದೆ. ಈ ಯೋಜನೆಯಡಿ ಸುಮಾರು ೧೦ ಕೋಟಿಗೂ ಹೆಚ್ಚು ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ.
ಪ್ರಧಾನ ಮಂತ್ರಿ ಸುರಕ್ಷಾ ವಿಮೆ :- ಅಪಘಾತ ವಿಮೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೂ ಈ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯ ಲಭಿಸಲಿದೆ. ಇದಕ್ಕಾಗಿ ಗ್ರಾಹಕರ ಖಾತೆಯಿಂದ ನೇರವಾಗಿ ಮಾಸಿಕ ೧ ರೂಪಾಯಿ ವಿಮಾ ಕಂತು ಕಡಿತ ಮಾಡಿಕೊಳ್ಳಲಾಗುತ್ತಿದೆ. ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ ೨ ಲಕ್ಷ ರೂ. ವಿಮೆ ಸಿಗಲಿದೆ.
ಮೇಕ್ ಇನ್ ಇಂಡಿಯಾ :- ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಈ ಯೋಜನೆಯು ’ಭಾರತದಲ್ಲೇ ತಯಾರಿಸಿ’ ಅಭಿಯಾನದ ಮೂಲಕ ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಅಟಲ್ ಪಿಂಚಣಿ ಯೋಜನೆ :- ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ೧ ಸಾವಿರದಿಂದ   ೫ ಸಾವಿರದವರೆಗೂ ಕನಿಷ್ಠ ನಿಶ್ಚಿತ ಪಿಂಚಣಿ ನೀಡುವ ಯೋಜನೆ ಇದಾಗಿದೆ. ೬೦ ನೇ ವಯಸ್ಸಿನಿಂದ ಪಿಂಚಣಿ ಆರಂಭವಾಗಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ೨೦೨೪ :- ಭಾರತದ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಆರು ಪದಕಗಳನ್ನು ತಮ್ಮದಾಗಿಸಿಕೊಂಡು ದೇಶಕ್ಕೆ ಕೀರ್ತಿ ತಂದಿರುತ್ತಾರೆ.
ಆಪರೇಷನ್ ಸಿಂಧೂರ್ :- ’ಪ್ರವಾಸಿಗರ ಸ್ವರ್ಗ’ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಭಾರತೀಯರ ಮೇಲೆ ಪಹಲ್‌ಗಾಮ್‌ನಲ್ಲಿ ಪಾಕ್ ಉಗ್ರಗಾಮಿಗಳು ಹಾಡುಹಗಲೆ ಗುಂಡಿಟ್ಟು ಕೊಂದು ಭಾರತೀಯ ಹೆಣ್ಣುಮಕ್ಕಳ ಹಣೆಯ ಕುಂಕುಮವನ್ನು ಅಳಿಸಿ ಹಾಕಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿ ಪಾಕ್ ಉಗ್ರಗಾಮಿಗಳ ಅಡಗುತಾಣಗಳನ್ನು ಧ್ವಂಸ ಮಾಡಿ ವಿಜಯಶಾಲಿಯಾಯಿತು.
ಭಾರತವೆಂಬ ಈ ಪುಣ್ಯಭೂಮಿಯಲ್ಲಿ ಹುಟ್ಟಿ ಸ್ವಾತಂತ್ರ್ಯದ ಸುಂದರ ವಾತಾವರಣದಲ್ಲಿ ಜೀವಿಸುತ್ತಿರುವುದು ನಮ್ಮ ಸೌಭಾಗ್ಯವೇ ಸರಿ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ

-ಟಿ. ನರೇಂದ್ರಬಾಬು, ಕನ್ನಡ ಭಾಷಾ ಶಿಕ್ಷಕರು

ವಿದ್ಯಾನಿಕೇತನ ಪ್ರೌಢಶಾಲೆ , ಸರಸ್ವತಿಪುರಂ, ತುಮಕೂರು.

ಮೊಬೈಲ್ ಸಂಖ್ಯೆ : ೯೫೩೮೧೮೪೮೦೧.

Related Posts

Leave a Reply

Your email address will not be published. Required fields are marked *