ಬೆಂಗಳೂರಿನಲ್ಲಿ 78 ವರ್ಷದ ವ್ಯಕ್ತಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಮಹಿಳೆ ಖಾಸಗಿ ವೀಡಿಯೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಮೊದಲು ಸ್ನೇಹ ಬೆಳೆಸಿದ ಮಹಿಳೆ ನಂತರ ಹಣಕ್ಕಾಗಿ ಒತ್ತಾಯಿಸಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ಕುಟುಂಬಕ್ಕೆ ವೈಯಕ್ತಿಕ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ವ್ಯಕ್ತಿಯ ಸೊಸೆ ದೂರು ದಾಖಲಿಸಿದ್ದಾರೆ.
ಸೈಬರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆರೋಪಿ ಮಹಿಳೆ ಮೊದಲು ಫೇಸ್‌ಬುಕ್‌ನಲ್ಲಿ 78 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಬಳಿಕ ವಾಟ್ಸ್ಆಪ್ ಸಂಖ್ಯೆ ನೀಡಿ ಸಂಭಾಷಣೆ ನಡೆಸಿದ್ದಾಳೆ.
ಸ್ನೇಹಪೂರ್ಣವಾಗಿ ಮಾತುಕತೆ ನಂತರ ಆತ್ಮೀಯ ವೀಡಿಯೋ ಕರೆಗಳಿಗೆ ವಿಸ್ತರಿಸಿದೆ. ಆರೋಪಿ ಮಹಿಳೆ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದು, ಮೊದಲಿಗೆ ಎರಡು ಲಕ್ಷ ರೂ.ಗೆ ಬೇಡಿಕೆ ಇಟ್ಟು, ನಂತರ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾಲೆ, ಕೊಡದಿದ್ದರೆ ಕುಟುಂಬದ ಸದಸ್ಯರನ್ನು ಖಾತೆಗೆ ಸೇರಿಸಿ ಖಾಸಗಿ ಫೋಟೊ ಮತ್ತು ವೀಡಿಯೊಗಳನ್ನು ಶೇರ್ ಮಾಡಿ ಅವಮಾನ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸೈಬರ್ ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಫೋನ್ ಸಂಖ್ಯೆಗಳ ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ.


