ಬೆಂಗಳೂರು, ಜ. 21: ಸಮಾಜವನ್ನು ತಿದ್ದಿ ತೀಡುವ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವರಿಗೆ ವಿಶೇಷ ಸೌಲಭ್ಯ ಒದಗಿಸಲು ನಮ್ಮ ಇಲಾಖೆ ಮುಂದಾಗಿದೆ. 60 ವರ್ಷ ಮೇಲ್ಪಟ್ಟ ಎಲ್ಲಾ ಪತ್ರಕರ್ತರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇಕಡ 75ರಷ್ಟು ರಿಯಾಯಿತಿ ನೀಡಲಾಗುವುದು. ಅಲ್ಪ ಶುಲ್ಕವನ್ನು ಪಾವತಿಸಿದರೆ ಸಾಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ, ರಾಯಚೂರು ಜಿಲ್ಲಾ ಉಸ್ತುವಾರಿ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಹಿರಿಯ ಪತ್ರಕರ್ತರ ವೇದಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಿರಿಯ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಿ ಸಚಿವರು ಭಾಷಣ ಮಾಡಿದರು.
ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿಯೂ ಶೇ. 25ರಷ್ಟು ಹಣದ ಬಗ್ಗೆಯೂ ರಿಯಾಯಿತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಪತ್ರಕರ್ತರು ನಮ್ಮ ಸರ್ಕಾರದ ಜವಾಬ್ದಾರಿ, ನಿವೃತ್ತರಾದ ಹಿರಿಯರಿಗೆ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಲು ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಮಾಜಕ್ಕೆ ಕೊಡುಗೆ ನೀಡಿ ವೃತ್ತಿಯಿಂದ ನಿವೃತ್ತರಾಗಿರುವ ಹಿರಿಯ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತಿದ್ದು, ಇದರ ನಿಯಮಗಳು, ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಪಾಟೀಲ್ ತಿಳಿಸಿದರು.
ಹಿರಿಯ ಪತ್ರಕರ್ತರಿಗೂ ಯಶಸ್ವಿನಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲು ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮದ ಪ್ರತಿನಿಧಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ವತಿಯಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್, ಹಿರಿಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಆರ್.ಪಿ. ಸಾಂಬ ಸದಾಶಿವರೆಡ್ಡಿ, ಹಿರಿಯ ಅಧಿಕಾರಿಗಳು, ಎಂ.ಎ. ಪೊನ್ನಪ್ಪ, ವೆಂಕಟೇಶ್ ಪ್ರಸಾದ್ ಇತರರು ಹಾಜರಿದ್ದರು.


