ಹಾಸನದ ಚಿಕ್ಕಗೊಂಡಗೊಳ ಗ್ರಾಮದಲ್ಲಿ 73 ಎಕರೆ ಸರ್ಕಾರಿ ಜಮೀನು ಅಕ್ರಮ ಮಂಜೂರು ಮಾಡಲಾಗಿದೆ ಎಂದು ಎಚ್‌ಡಿ ರೇವಣ್ಣ ಆರೋಪಿಸಿದ್ದಾರೆ. ಭೂ ಮಾಫಿಯಾ, ಲೇಔಟ್ ಮಾಫಿಯಾ, ಅಧಿಕಾರಿಗಳು ಸೇರಿ 750 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಾಗ ಅಕ್ರಮ ಮಂಜೂರು ಮಾಡಿಸಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ.
750 ಕೋಟಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು 97 ಮಂದಿಗೆ ಅಕ್ರಮ ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ನಾಲ್ಕು ಜನ ಜೆಡಿಎಸ್ ಶಾಸಕರು ಮನವಿ ಪತ್ರ ನೀಡಿದ್ದು, ವಿಧಾನ ಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದೇವೆ ಎಂದಿದ್ದಾರೆ.
ಹಾಸನ ಉಸ್ತುವಾರಿ, ಕಂದಾಯ ಸಚಿವ ಕೃಷ್ಣಬೈರೇಗೌಡ ತನಿಖೆಗೆ ಆದೇಶ ಮಾಡಿ ಒಂದು ವರ್ಷ ಆಗಿದೆ. ಈಗಿನ ಡಿಸಿಎಂ ಹಾಸನ ಜಿಲ್ಲೆಯಲ್ಲಿ ನಡೆದ ಅಕ್ರಮ ಬಗ್ಗೆ ಪೂರ್ತಿ ತನಿಖೆ ಮಾಡಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ.
ಚಿಕ್ಕಗೊಂಡಗುಳ ಗ್ರಾಮ ಸರ್ವೇನಂ 7,10,25,106ರಲ್ಲಿ ಸರ್ಕಾರಿ ಜಾಗ 73 ಎಕರೆ 97 ಜನಕ್ಕೆ ಅಕ್ರಮವಾಗಿ ಮಂಜೂರು ಆಗಿದೆ. ತನಿಖೆಗೆ ಕಳ್ಳರಿದ್ದ ತಂಡವನ್ನೇ ರಚಿಸಿದ್ದು, ಈವರೆಗೆ ತನಿಖಾ ತಂಡ ಏನೂ ಉತ್ತರಿಸಿಲ್ಲ. ಯಾವ್ಯಾವುದಕ್ಕೋ ಎಸ್‌ಐಟಿ ರಚನೆ ಮಾಡ್ತೀರಿ, ಇದಕ್ಕೆ ಮಾಡಿ ಎಂದು ಹೇಳಿದ್ದಾರೆ.
ಕಂದಾಯ ಸಚಿವರು ಮನವಿ ಸ್ವೀಕರಿಸಿ ಒಂದು ವರ್ಷ ಆದರೂ ಸುಮ್ಮನಿದ್ದಾರೆ ಅಂದ್ರೆ ಈ ಹಗರಣದ ಹಿಂದೆ ಯಾರೋ ದೊಡ್ಡವರಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.


