Thursday, September 18, 2025
Menu

ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ 7 ತಲೆಬರುಡೆ ಪತ್ತೆ, ಒಂದು ಗುರುತು ಪತ್ತೆ!

dharmastala case

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)  ಬಂಗ್ಲೆಗುಡ್ಡದಲ್ಲಿ 2ನೇ ದಿನ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮತ್ತೆರಡು ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ.

ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿದ್ದೇನೆ ಎಂದು ಸೌಜನ್ಯ ಅವರ ಮಾವ ವಿಠಲ್ ಗೌಡ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಎಸ್ಐಟಿ ನೇತ್ರಾವತಿ ನದಿ ತೀರದಲ್ಲಿ ಮತ್ತೆ ಶೋಧ ಕಾರ್ಯ ಆರಂಭಿಸಿದ್ದು, ಎರಡನೇ ದಿನ 2 ಅಸ್ಥಿಪಂಜರ ಹಾಗೂ ಮೂಳೆಗಳು ಪತ್ತೆಯಾಗಿವೆ. ಇದರಿಂದ ಕಳೆದೆರಡು ದಿನಗಳಲ್ಲಿ 7 ಅಸ್ಥಿಪಂಜರ ಹಾಗೂ 113ಕ್ಕೂ ಅಧಿಕ ಮೂಳೆಗಳು ಪತ್ತೆಯಾದಂತಾಗಿವೆ.

ಬುಧವಾರ ನಡೆದ ತಪಾಸಣೆ ವೇಳೆ ಪತ್ತೆಯಾದ 5 ಅಸ್ಥಿಪಂಜರಗಳು ಪುರುಷರದ್ದು ಎಂದು ವಿಧಿ ವಿಜ್ಞಾನ ತಜ್ಞರ ತಂಡ ಹೇಳಿದೆ. ಅಲ್ಲದೇ ಇವು ಆತ್ಮಹತ್ಯೆ ಮಾಡಿಕೊಂಡ ರೀತಿ ಇವೆ ಎಂದು ಹೇಳಿದೆ. ಇದರಿಂದ ಪ್ರಕರಣ ಮತ್ತಷ್ಟು ಕಗ್ಗಂಟಾಗುವ ಸೂಚನೆ ದೊರೆತಿದೆ.

ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು, ನೇಣು ಬಿಗಿದ ಅನುಮಾನ ಮೂಡಿಸಿದೆ. ಮಹಜರು ಸಂದರ್ಭದಲ್ಲಿ ಪತ್ತೆಯಾದ ವಸ್ತುಗಳನ್ನು ಎಸ್ಐಟಿ ಅಧಿಕಾರಿಗಳು ಸೀಲ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಸೋಕೋ ಮತ್ತು ಎಫ್‌ಎಸ್‌ಎಲ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರ ಹಾಗೂ ಪತ್ತೆಯಾದ ವಸ್ತುಗಳನ್ನು ಸಂಗ್ರಹಿಸಿವೆ.

ಬಂಗ್ಲೆಗುಡ್ಡದಲ್ಲಿ ಬುಧವಾರ ಒಟ್ಟು ಐದು ಬುರುಡೆಗಳು ಮತ್ತು ಮೂಳೆಗಳು ಪತ್ತೆಯಾಗಿದ್ದು, ಎಸ್ಐಟಿ ಪಂಚರ ಸಮ್ಮುಖದಲ್ಲಿ ಮಹಜರು ಪೂರ್ಣಗೊಳಿಸಲಾಗಿತ್ತು.

ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ಮಹಜರು ನಡೆಯಿತು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿದ್ದು, ಅವುಗಳನ್ನು ಸಂಗ್ರಹಿಸಲಾಗಿದೆ.

ಒಂದು ಶವದ ಗುರುತು ಪತ್ತೆ

ಬುಧವಾರ ಪತ್ತೆಯಾದ ಅಸ್ಥಿಪಂಜರದ ಬಳಿ ಒಂದು ಐಡಿ ಕಾರ್ಡ್​ ಸಿಕ್ಕಿದ್ದು, ಅದು ಯು.ಬಿ.ಅಯ್ಯಪ್ಪ ಎಂಬುವರ ಐಡಿ ಕಾರ್ಡ್ ಆಗಿದ್ದು, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ಅಯ್ಯಪ್ಪ 2017ರಲ್ಲಿ ಕಾಣೆಯಾಗಿದ್ದರು.

2017ರಲ್ಲಿ ಮೈಸೂರಿನ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಅಯ್ಯಪ್ಪ, ಅಂದಿನಿಂದ ಕಾಣೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು, ಕುಟ್ಟ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು. ಹೀಗಾಗಿ ಸಿಕ್ಕ ಅಸ್ಥಿಪಂಜರ ಸಹ ಅಯ್ಯಪ್ಪನವರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಯ್ಯಪ್ಪ ಕಾಣೆಯಾಗಿರುವ ಬಗ್ಗೆ ಅವರ ಪುತ್ರ ಜೀವನ್ ಎನ್ನುವರು ನೀಡಿದ ದೂರಿನ ಬಗ್ಗೆ 15-06-2017ರಂದು ಕುಟ್ಟ ಠಾಣೆ ಎಫ್ಐಆರ್ ದಾಖಲಾಗಿತ್ತು. ಆಸ್ಪತ್ರೆಗೆಂದು ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ ಅಯ್ಯಪ್ಪ, ಬೆಳಗ್ಗೆ 11.30ರ ನಂತರ ಅವರ ಮೊಬೈಲ್ ಸ್ವಿಚ್ ಅಫ್ ಆಗಿತ್ತು. ಇದಾದ ಬಳಿಕ ಕುಟುಂಬ ಒಂದು ವಾರ ಹುಡುಕಾಡಿತ್ತು. ಕೊನೆಗೆ ಅಯ್ಯಪ್ಪ ಸುಳಿವು ಸಿಗದಿದ್ದಾಗ ಜೀವನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ, ದೂರು ನೀಡಿದರೂ ಸಹ ಅಯ್ಯಪ್ಪ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ ಎಂಟು ವರ್ಷಗಳ ಬಳಿಕ ಬಂಗ್ಲೆಗುಡ್ಡೆಯಲ್ಲಿ ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ.

Related Posts

Leave a Reply

Your email address will not be published. Required fields are marked *