ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ಬೇಡಿಕೆಗೆ ಅನುಸಾರವಾಗಿ ಸಮರ್ಪಕ ವಿದ್ಯುತ್ ಸರಬರಾಜಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್‌ಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಬೆಸ್ಕಾಂನ ಬೆಳಕು ಭವನದಲ್ಲಿ ಶುಕ್ರವಾರ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಇಲಾಖೆ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರಲ್ಲದೆ, “ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮನ್ವಯತೆ ಸಾಧಿಸಲು ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮತ್ತು ಖರೀದಿಗೆ ಕ್ರಮ ಕೈಗೊಳ್ಳಬೇಕು,” ಎಂದು ತಿಳಿಸಿದರು.
“ಬೇಸಿಗೆಯಲ್ಲಿ ಅದರಲ್ಲೂ ಮುಖ್ಯವಾಗಿ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಮೂರು ತಿಂಗಳಲ್ಲಿ ವಿದ್ಯುತ್ ಬೇಡಿಕೆ ಎಷ್ಟಾಗಬಹುದು ಎಂಬುದನ್ನು ಈಗಲೇ ಲೆಕ್ಕಾಚಾರ ಮಾಡಿ ಅದಕ್ಕೆ ತಕ್ಕಂತೆ ಪೂರೈಸಲು ವಿದ್ಯುತ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಹಗಲು ವೇಳೆ ಸೌರ ವಿದ್ಯುತ್ ಹೇರಳವಾಗಿ ಲಭ್ಯವಿರುವುದರಿಂದ ಅದನ್ನು ಬಳಸಿಕೊಂಡು ರಾತ್ರಿ ವೇಳೆ ಜಲ ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಪೂರೈಕೆ ಉತ್ಪಾದನೆಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು,” ಎಂದು ಹೇಳಿದರು.
“ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ವಿನಿಮಯ ಅಥವಾ ದೀರ್ಘಾವಧಿ ಖರೀದಿ ಆಧಾರದ ಮೇಲೆ ಅನ್ಯ ರಾಜ್ಯಗಳಿಂದ ವಿದ್ಯುತ್ ಪಡೆಯಲು ಹಾಗೂ ಸಕ್ಕರೆ ಜತೆಗೆ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಖಾನೆಗಳೊಂದಿಗೆ ಈಗಲೇ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಬೇಸಿಗೆಯಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಾದರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡಬಹುದು. ಆದರೆ, ಯಾವುದೇ ಕಾರಣಕ್ಕೂ ಕೊರತೆ ಉಂಟಾಗಬಾರದು,” ಎಂದರು.
ಕೃಷಿಗೆ ಹಗಲು 7 ಗಂಟೆ ವಿದ್ಯುತ್:
“ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಕುಸುಮ್- ಸಿ ಯೋಜನೆಯಡಿ ಫೀಡ್ ಸೋಲರೈಸೇಷನ್ ಮೂಲಕ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು 7 ಗಂಟೆ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರಸ್ತುತ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದರಿಂದ ಇತರೆ ಭಾಗಗಳಲ್ಲೂ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು,” ಎಂದು ಸಚಿವರು ನಿರ್ದೇಶನ ನೀಡಿದರು.
ಪಿಸಿಕೆಎಲ್ ಅಧಿಕಾರಿಗಳು ಮಾಹಿತಿ ನೀಡಿ, “ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್ ತಿಂಗಳಲ್ಲಿ ದಾಖಲೆಯ 17,220 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಬಂದಿದ್ದು,ಸಮರ್ಪಕವಾಗಿ ಪೂರೈಕೆ ಮಾಡಲಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 5ರಷ್ಟು ಹೆಚ್ಚುವರಿ ವಿದ್ಯುತ್ ಬೇಡಿಕೆ ನಿರೀಕ್ಷಿಸಲಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೇಡಿಕೆ ಅವಧಿಯಲ್ಲಿ ಅಂದರೆ ಬೆಳಗ್ಗೆ ಮತ್ತು ಸಂಜೆ ಜಲ ವಿದ್ಯುತ್ ಮತ್ತು ಉಷ್ಣ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುವುದು.” ಎಂದು ತಿಳಿಸಿದರು.
“ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಜುಲೈ ಅಂತ್ಯದವರೆಗೆ ಪ್ರತಿನಿತ್ಯ 33 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ಅದೇ ರೀತಿ ರಾಯಚೂರು, ಯರಮರಸ್ ಮತ್ತು ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿರುವ ಘಟಕಗಳನ್ನೂ ಬೇಸಿಗೆಯಲ್ಲಿ ಅಗತ್ಯ ವಿದ್ಯುತ್ ಉತ್ಪಾದಿಸಲು ಅನುವಾಗುವಂತೆ ಸಿದ್ಧಗೊಳಿಸಲಾಗುತ್ತಿದೆ. ಜತೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದಲೂ ಸಾಕಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದೆ,” ಎಂದು ವಿವರಿಸಿದರು.
ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಶಂಕರ ಎನ್., ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್., ಕೃಷ್ಣ ಬಾಜಪೇಯಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಆರ್.ಜಯಕುಮಾರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ ರಾಜು, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಸೇರಿದಂತೆ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.


