ಬೆಂಗಳೂರಿನಲ್ಲಿ 68ರ ವೃದ್ಧರೊಬ್ಬರು 25ರ ಯುವತಿಯ ಹನಿಟ್ರ್ಯಾಪ್ ಬಲೆಯೊಳಗೆ ಸಿಲುಕಿರುವುದು ಬಯಲಾಗಿದೆ. ಯುವತಿ ವೃದ್ಧರಲ್ಲಿ ಎರಡು ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟು ಬೆದರಿಸಿರುವುದಾಗಿ ಆರೋಪಿಸಲಾಗಿದೆ.
ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾಳೆ. ಎರಡು ಕೋಟಿ ರೂ. ನೀಡದಿದ್ದರೆ ಖಾಸಗಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಜಯ್, ಅಭಿ ಎಂಬವರ ವಿರುದ್ಧ ವೃದ್ಧರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೋರಮಂಗಲದ ಕಾಫಿ ಬಾರ್ ಒಂದರಲ್ಲಿ ಖಾಸಗಿ ವೀಡಿಯೋಗಳನ್ನು ತೋರಿಸಿ ಹಣ ಕೇಳಿದ್ದಾರೆ. ಖಾಸಗಿ ವೀಡಿಯೋಗಳನ್ನು ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳಿಬ್ಬರು ಎರಡು ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿ, 40 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. 2-3 ದಿನಗಳ ಒಳಗೆ ಹಣ ನೀಡದಿದ್ದರೆ ವೀಡಿಯೋ ಪೋಸ್ಟ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಸಗಿ ವೀಡಿಯೋಗಳನ್ನು ಎಡಿಟ್ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.