ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿದಂತೆ 6 ಮಂದಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ರಾರಾವಿ ಗ್ರಾಮದ ನಿವಾಸಿಗಳಾದ ಬೀರಪ್ಪ (45), ಸುನೀಲ (40) ಮತ್ತು ವಿನೋದ (14) ಮೃತಪಟ್ಟ ದುರ್ದೈವಿಗಳು.
ಕುರಿ ಮೇಯಿಸಲು ತೆರಳಿದ್ದ ಕುಟುಂಬ ಮಳೆ ಬರುತ್ತಿದ್ದ ಕಾರಣ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರದಲ್ಲಿ ಇಬ್ಬರು ಸಾವು
ವಿಜಯನಗರದ ಮುದ್ದೆಬಿಹಾಳ ತಾಲೂಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಇಬ್ಬರು ರೈತರು ಅಸುನೀಗಿದ್ದು, ಎರಡು ಎತ್ತುಗಳು ಮೃತಪಟ್ಟಿವೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ಯಂಕಪ್ಪ ಜಾಡಿ (45) ಹಾಗೂ ಎರಡು ಎತ್ತುಗಳು ಮೃತಪಟ್ಟ ಘಟನೆ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇದೇ ತಾಲೋಕಿನ ತಂಗಡಗಿ ಗ್ರಾಮದಲ್ಲಿ ತಾಳಿಕೋಟೆ (47) ಎಂಬ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುದ್ದೆ ಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗೆದ್ಲಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶಪ್ಪ (65) ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.