ಲೂಧಿಯಾನ: ದೇವಸ್ಥಾನದಿಂದ ಮರಳುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದ್ದರಿಂದ ಇಬ್ಬರು ಮಕ್ಕಳು ಸೇರಿ 6 ಯಾತ್ರಿಕರು ಮೃತಪಟ್ಟ ಘಟನೆ ಪಂಜಾಬ್ ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಭಾನುವಾರ ರಾತ್ರಿ 29 ಯಾತ್ರಿಕರನ್ನು ಹೊತ್ತ ಪಿಕಪ್ ವಾಹನ ಲೂಧಿಯಾನದ ಜಾಗೇರಾ ಸೇತುವೆ ಮೇಲಿಂದ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿ 19 ಯಾತ್ರಿಕರನ್ನು ರಕ್ಷಿಸಲಾಗಿದೆ.
ಮೃತಪಟ್ಟ 6 ಮಂದಿಯಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದ್ದಾರೆ. ಕಾಣೆಯಾದ ಇನ್ನೂ ನಾಲ್ವರು ಭಕ್ತರಿಗಾಗಿ ಶೋಧ ಮುಂದುವರೆದಿದೆ.
ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಲ ಗಾಯಾಳುಗಳು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಜೈನ್ ತಿಳಿಸಿದ್ದಾರೆ.
ಭಾನುವಾರ ರಾತ್ರಿ 9:30ಕ್ಕೆ ಪಿಕಪ್ ವಾಹನ ಕಾಲುವೆ ಉರುಳಿದೆ. ಮಾಹಿತಿ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಜನರ ರಕ್ಷಣೆಗೆ ಮುಂದಾದರು. ಹಲವರನ್ನು ಮೇಲಕ್ಕೆತ್ತಲಾಯಿತು. ವೇಗವಾಗಿ ಹರಿಯುತ್ತಿದ್ದ ನೀರಿನಿಂದ ಕೆಲವರು ಕೊಚ್ಚಿ ಹೋದರು. ಘಟನೆಗೆ ಅತಿ ವೇಗ ಮತ್ತು ಚಾಲಕ ಆಯಾಸಗೊಂಡಿದ್ದೆ ಕಾರಣ” ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಒಟ್ಟು 13 ಮಂದಿ ಗಾಯಾಳುಗಳು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾದರು. ಅವರ ಪೈಕಿ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದರು.
ಅಪಘಾತದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಸಿಬ್ಬಂದಿಯೂ ರಕ್ಷಣಾ ಕಾರ್ಯಕ್ಕೆ ನೆರವು ನೀಡಿದರು. ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.