ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಪ್ರತಿಪಕ್ಷ ಅಭ್ಯರ್ಥಿಯ ಮತ ಚಲಾಯಿಸಿದ ಚಿಕ್ಕಬಳ್ಳಾಪುರ ನಗರಸಭೆಯ 6 ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
2024ರ ಸೆಪ್ಟೆಂಬರ್ 12 ರಂದು ನಡೆದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ವಿಪ್ ಜಾರಿ ಮಾಡಿದ್ದರೂ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸದೇ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿದ್ದರು.
ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ. ಸುಧಾಕರ್ ಗೆ ಪ್ರತಿಷ್ಠೆಯ ಕಣವಾಗಿದ್ದ ಚಿಕ್ಕಬಳ್ಳಾಪುರ ನಗರಸಭೆಯ ಗದ್ದುಗೆ ವಿಷಯದಲ್ಲಿ ನಡೆದ ಹೈಡ್ರಮಾದಲ್ಲಿ ಕಾಂಗ್ರೆಸ್ 6 ಸದಸ್ಯರು ಸುಧಾಕರ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಅಂತಿಮವಾಗಿ ಕಾಂಗ್ರೆಸ್ 6 ಮಂದಿ ಸದಸ್ಯರು ಚುನಾವಣೆ ದಿನ ಸುಧಾಕರ್ ಜೊತೆಯಲ್ಲೇ ಬಸ್ ನಲ್ಲಿ ಬಂದು ಸುಧಾಕರ್ ಬೆಂಬಲಿ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದರು. ಇದರಿಂದ ಶಾಸಕ ಪ್ರದೀಪ್ ಈಶ್ವರ್ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿತ್ತು.
ಕಾಂಗ್ರೆಸ್ ಸದಸ್ಯರು ವಿಪ್ ಜಾರಿ ಮಾಡಿದ್ದರೂ ವಿಪ್ ಉಲ್ಲಂಘಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದು, 6 ತಿಂಗಳ ವಿಚಾರಣೆ ನಂತರ 6 ಮಂದಿಯನ್ನು ಅನರ್ಹಗೊಳಿಸಲಾಗಿದೆ.
ಚಿಕ್ಕಬಳ್ಳಾಪುರ ನಗರಸಭೆಯ 2ನೇ ವಾರ್ಡಿನ ಸದಸ್ಯೆ ರತ್ನಮ್ಮ, 22ನೇ ವಾರ್ಡಿನ ಸ್ವಾತಿ ಮಂಜುನಾಥ್, 24ನೇ ವಾರ್ಡಿನ ಅಂಬಿಕಾ, 27ನೇ ವಾರ್ಡಿನ ನೇತ್ರಾವತಿ, 7ನೇ ವಾರ್ಡಿನ ಸತೀಶ್ ಹಾಗೂ 13ನೇ ವಾರ್ಡ್‌ನ ನಿರ್ಮಲಾಪ್ರಭುರನ್ನ ಅನರ್ಹಗೊಳಿಸಿ ಆದೇಶ ಮಾಡಲಾಗಿದೆ.