Menu

ಆಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ: ಕನಿಷ್ಠ 20 ಮಂದಿ ಬಲಿ

ಆಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ 20 ಮಂದಿ ಅಸುನೀಗಿದ್ದು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭಾನುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಸಮಂಗನ್ ಪ್ರಾಂತ್ಯದಲ್ಲಿ ಕೇಂದ್ರೀಕೃತವಾದ ಭೂಕಂಪನ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಿಸಿದೆ.

ದೇಶದ ವಾಯುವ್ಯ, ಮಧ್ಯ, ಪಶ್ಚಿಮ, ಉತ್ತರ, ಈಶಾನ್ಯ ಮತ್ತು ಪೂರ್ವ ವಲಯಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದರಿಂದ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವುಂಟಾಗಿದೆ ಎಂದು ಹೇಳಲಾಗಿದೆ.

ಭೂಕಂಪಕ್ಕೆ ತುತ್ತಾದ ಪ್ರದೇಶಗಳಲ್ಲಿ ಹಾನಿ ಪ್ರಮಾಣದ ಅಂದಾಜು ನಡೆಯುತ್ತಿದ್ದು, ಈ ಬಗ್ಗೆ ಸಂಪೂರ್ಣ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು. ಭೂಕಂಪದ ನಂತರ ತುರ್ತು ಪರಿಹಾರ ಮತ್ತು ಸಹಾಯವನ್ನು ಖಚಿತಪಡಿಸಿಕೊಳ್ಳಲು ಪ್ರಾಂತೀಯ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ವರದಿಯಾಗಿದೆ. 23 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಉತ್ತರ ಅಫ್ಘಾನಿಸ್ತಾನದ ಗಡಿಯಲ್ಲಿರುವ ಮೂರು ದೇಶಗಳಾದ ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.

ಕಳೆದ ತಿಂಗಳು ಸಂಭವಿಸಿದ್ದ ಭೂಕಂಪದಿಂದ 1,400 ಕ್ಕೂ ಹೆಚ್ಚು ಮಂದಿ ಸಾವು: ಸೆಪ್ಟಂಬರ್ ಆರಂಭದಲ್ಲಿ ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ, 1400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 3,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Related Posts

Leave a Reply

Your email address will not be published. Required fields are marked *