Monday, September 08, 2025
Menu

ಹೆಸರಘಟ್ಟದಲ್ಲಿ ಕ್ಯೂ-ಸಿಟಿಗೆ 6.17 ಎಕರೆ ಜಾಗ ಮಂಜೂರು

ಅತ್ಯಾಧುನಿಕ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್‌ಗಳಿಗೆ ಇನ್ಕ್ಯೂಬೇಷನ್‌ ಸೌಲಭ್ಯಗಳು ಹಾಗೂ ಕೈಗಾರಿಕಾ-ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿರುವ ಕ್ಯೂ-ಸಿಟಿ (ಕ್ವಾಂಟಮ್‌ ಸಿಟಿ) ಸ್ಥಾಪನೆಗೆ ರಾಜ್ಯ ಸರ್ಕಾರ ಹೆಸರುಘಟ್ಟದಲ್ಲಿ 6.17 ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಕ್ಯೂ-ಸಿಟಿ (Q- ಸಿಟಿ (ಕ್ವಾಂಟಮ್) ನಗರಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ದೇಶದ ಮೊದಲ ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಕ್ವಾಂಟಮ್‌ ಸಿಟಿ ಗೆ ಜಾಗವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ RD-LGB/90/2025 (03 ಸೆಪ್ಟೆಂಬರ್ 2025) ರ ಪ್ರಕಾರ ಭೂಮಿಯನ್ನು ಹಂಚಿಕೆ ಮಾಡಿ ಆದೇಶಿಸಲಾಗಿದೆ. ಅಲ್ಲದೇ, ಅಂತಾರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ (ICTS–TIFR) ವಿಸ್ತರಣೆಗೆ 8 ಏಕರೆ ಭೂಮಿಯನ್ನೂ ನೀಡಲಾಗಿದೆ. ICTS–TIFRಗೆ ನೀಡಲಾದ ಹೆಚ್ಚುವರಿ ಭೂಮಿ, ಸೈದ್ಧಾಂತಿಕ ವಿಜ್ಞಾನ ಕ್ಷೇತ್ರದಲ್ಲಿ ಅದರ ಶೈಕ್ಷಣಿಕ ಮತ್ತು ಸಂಶೋಧನಾ ವಿಸ್ತರಣೆಗೆ ನೆರವಾಗಲಿದೆ. ಎರಡೂ ಅಭಿವೃದ್ಧಿಗಳು ಸೇರಿ ಕರ್ನಾಟಕವನ್ನು ಉನ್ನತ ವಿಜ್ಞಾನ ಮತ್ತು ನವೀನತೆಯ ಕೇಂದ್ರವಾಗಿ ಎತ್ತಿ ಹಿಡಿಯಲಿವೆ ಎಂದು ತಿಳಿಸಿದ್ದಾರೆ.

“ಕರ್ನಾಟಕದ ದೃಷ್ಟಿಯಲ್ಲಿ ಇದು ಐತಿಹಾಸಿಕ ಘಟ್ಟವಾಗಿದೆ. ಹೆಸರಘಟ್ಟದಲ್ಲಿ ನಿರ್ಮಾಣಗೊಳ್ಳಲಿರುವ ಕ್ವಾಂಟಮ್‌ ಸಿಟಿ ಜಾಗತಿಕ ಪ್ರತಿಭೆ, ಹೂಡಿಕೆಗಳನ್ನು ಆಕರ್ಷಿಸಲಿದೆ ಮತ್ತು ಬೆಂಗಳೂರನ್ನು ಭಾರತದ ಹಾಗೂ ವಿಶ್ವದ ಕ್ವಾಂಟಮ್‌ ಭೂಪಟದ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಅಭಿವೃದ್ದಿಯಾಗಲು ಸಹಕಾರಿಯಾಗಲಿದೆ,” ಎಂದು ಭೋಸರಾಜು ಹೇಳಿದ್ದಾರೆ.

ಕ್ಯೂ-ಸಿಟಿಯಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತಾ ಕೇಂದ್ರಗಳು, ಕ್ವಾಂಟಮ್ ಹಾರ್ಡ್‌ವೇರ್‌ಗಳಿಗಾಗಿ ಉತ್ಪಾದನಾ ಕ್ಲಸ್ಟರ್‌ಗಳು, ಪ್ರೊಸೆಸರ್‌ಗಳು ಮತ್ತು ಸಹಾಯಕಗಳು ಹಾಗೂ ಕ್ವಾಂಟಮ್ ಎಚ್ .ಪಿ.ಸಿ. ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳನ್ನು ಸಂಯೋಜಿಸಲಿದೆ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *