ಓವಲ್: ನಿರ್ಣಾಯಕ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡುವಂತೆ ಭಾರತ ತಂಡವನ್ನು ಆಹ್ವಾನಿಸಿದೆ.
ಓವಲ್ ನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋಲುವ ಮೂಲಕ ಭಾರತ ತಂಡ ಸತತ 15ನೇ ಬಾರಿ ಟಾಸ್ ಸೋತ ತಂಡ ಎಂಬ ದಾಖಲೆ ಬರೆಯಿತು.
ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತ ತಂಡ ಸತತ 12 ಬಾರಿ ಟಾಸ್ ಸೋತಿದ್ದು, ಇದರಲ್ಲಿ ಏಕದಿನ ಪಂದ್ಯಗಳು ಸೇರಿವೆ. ಶುಭಮನ್ ಗಿಲ್ ಸಾರಥ್ಯದಲ್ಲಿ 5ನೇ ಬಾರಿ ಟಾಸ್ ಸೋತಿದೆ. 2011ರಿಂದ 2013ರ ಅವಧಿಯಲ್ಲಿ ಐರ್ಲೆಂಡ್ 11 ಬಾರಿ ಸತತ ಟಾಸ್ ಸೋತಿದ್ದು ಇದುವರೆಗಿನ ದಾಖಲೆಯಾಗಿದೆ.
ಭಾರತ ತಂಡದಲ್ಲಿ 4 ಬದಲಾವಣೆ ಮಾಡಲಾಗಿದ್ದು, ಗಾಯಗೊಂಡಿದ್ದ ರಿಷಭ್ ಪಂತ್, ಶಾರ್ದೂಲ್ ಠಾಕೂರ್, ಜಸ್ ಪ್ರೀತ್ ಬುಮ್ರಾ ಹಾಗೂ ಕಂಬೋಜ್ ಬದಲಿಗೆ ಧ್ರುವ ಜುರೆಲ್, ಪ್ರಸಿದ್ಧ ಕೃಷ್ಣ, ಕರುಣ್ ನಾಯರ್, ಅಕ್ಷ್ ದೀಪ್ ಸ್ಥಾನ ಪಡೆದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1ರಿಂದ ಮುನ್ನಡೆ ಸಾಧಿಸಿದೆ. ಭಾರತ ಸರಣಿ ಡ್ರಾ ಮಾಡಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.