ಬಿಹಾರದಲ್ಲಿ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಯಿಂದ ಒಂದೇ ದಿನ (ಗುರುವಾರ) ರಾಜ್ಯಾದ್ಯಂತ 58 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 23 ಜನರು ಸಿಡಿಲು ಬಡಿದು ಮೃತಪಟ್ಟಿದ್ದರೆ 35 ಜನರು ಮರ, ಗೋಡೆಗಳು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನಳಂದ ಜಿಲ್ಲೆಯಲ್ಲಿ ಮಳೆಯಿಂದ ಅತಿ ಹೆಚ್ಚಿನ ಹಾನಿಯಾಗಿದೆ. ಗಾಳಿಯಿಂದ 22 ಮಂದಿ ಅಸು ನೀಗಿದ್ದಾರೆ. ಸಿವಾನ್‌ನಲ್ಲಿ ಸಿಡಿಲು ಬಡಿದು 4 ಮಂದಿ ಮೃತಪಟ್ಟಿದ್ದಾರೆ. ಬಿಹಾರದ ಎಂಟು ಜಿಲ್ಲೆಗಳಲ್ಲಿ ಸಿಡಿಲು ಬಡಿದು 25 ಜನರು ಮೃತಪಟ್ಟ ಒಂದು ದಿನದ ನಂತರ ಈ ದುರಂತ ನಡೆದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ರೈತರು ಮತ್ತು ದಿನಗೂಲಿ ಕಾರ್ಮಿಕ ರಾಗಿದ್ದು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಪ್ರಾಣ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆಯ ಸಲಹೆಗಳನ್ನು ಪಾಲಿಸುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.
ದರ್ಭಂಗಾ, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಕಿಶನ್‌ಗಂಜ್, ಅರಾರಿಯಾ, ಸುಪೌಲ್, ಗಯಾ, ಸೀತಾಮರ್ಹಿ, ಶಿಯೋಹರ್, ನಲಂದಾ, ನವಾಡ ಮತ್ತು ಪಾಟ್ನಾ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಭಾರತ ಹವಾಮಾನ ಇಲಾಖೆ ಅರೇಂಜ್ ಅಲರ್ಟ್ ಜಾರಿ ಮಾಡಿದೆ. ಈ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಧುಬನಿ, ದರ್ಭಂಗಾ, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಕಿಶನ್‌ಗಂಜ್, ಅರಾರಿಯಾ, ಸುಪೌಲ್, ಗಯಾ, ಸೀತಾಮರ್ಹಿ, ಶಿಯೋಹರ್, ನಲಂದಾ, ನವಾಡ, ಪಾಟ್ನಾಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.