ನೇಪಾಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಪ್ರವಾಹವುಂಟಾಗಿದ್ದು ಭೂಕುಸಿತ ಸಂಭವಿಸಿ ಕನಿಷ್ಠ 52 ಮಂದಿ ಪ್ರಾಣ ಕಳೆದುಕೊಂಡಿದ್ದು, 5 ಮಂದಿ ನಾಪತ್ತೆಯಾಗಿದ್ದಾರೆ.
ಶನಿವಾರ ರಾತ್ರಿ ಸುರಿದ ವಯಾಪಕ ಮಳೆಯಿಂದಾಗಿ ಭೂಕುಸಿತವುಂಟಾಗಿ ಕೋಶಿ ಪ್ರಾಂತ್ಯದ ಇಲಾಮ್ ಜಿಲ್ಲೆಯ ನಾನಾ ಕಡೆ 37 ಜನರು ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ರೌತಹತ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಅಸು ನೀಗಿದ್ದಾರೆ.
ಮಳೆ ಸಂಬಂಧಿ ಅವಘಡಗಳಿಂದಾಗಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ರಸುವಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ನಾಲ್ವರು ಕಾಣೆಯಾಗಿದ್ದಾರೆ. ಪಂಚ ತಾರ್‌ಜಿಲ್ಲೆಯಲ್ಲಿ ಭೂಕುಸಿತದಲ್ಲಿ ವ್ಯಕ್ತಿಯೊಬ್ಬ ಸಮಾಧಿಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ರಕ್ಷಣಾ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ. ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಸೇನೆ ಸಂತ್ರಸ್ತರಿಗೆ ಆಹಾರ, ಔಷಧಿ ಮತ್ತು ತಾತ್ಕಾಲಿಕ ವಸತಿಯನ್ನು ಒದಗಿಸುತ್ತಿದೆ. ಭಾರಿ ಮಳೆಯ ಕಾರಣ ರಕ್ಷಣಾ ಕಾರ್ಯಾಚರಣೆಗೆ ಸವಾಲುಗಳು ಎದುರಾಗಿವೆ. ರಸ್ತೆಗಳು ಕೊಚ್ಚಿಹೋಗಿರುವುದರಿಂದ ಹಲವು ಗ್ರಾಮಗಳಿಗೆ ಸಂಪರ್ಕ ದುಸ್ತರವಾಗಿದೆ. ಭೂಕುಸಿತದ ಕಾರಣ ಕಠ್ಮಂಡು ಪ್ರದೇಶದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ದೇಶೀಯ ವಿಮಾನಗಳ ಸಂಚಾರವನ್ನು ಕೂಡ ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿರುವ ಈ ದುರಂತಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯವನ್ನು ಒದಗಿಸಲು ಭಾರತ ಸಿದ್ಧವಿದೆ, ನೇಪಾಳದ ಜನತೆಗೆ ಈ ಕಷ್ಟದ ಸಮಯದಲ್ಲಿ ಭಾರತ ಜೊತೆಗಿದೆ. ನಾವು ಸಂತ್ರಸ್ತರಿಗೆ ಸಾಧ್ಯವಾದ ಸಹಾಯವನ್ನು ನೀಡುತ್ತೇವೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.