ಹೈದರಾಬಾದ್: ಚುನಾವಣೆಯ ವೇಳೆ ನೀಡಿದ ಭರವಸೆ ಈಡೇರಿಸಲು ಎರಡು ಜಿಲ್ಲೆಗಳಲ್ಲಿ ಒಂದು ವಾರದಲ್ಲಿ ಸುಮಾರು 500ಕ್ಕೂ ಅಧಿಕ ಬೀದಿನಾಯಿಗಳನ್ನು ಹತ್ಯೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕಮರೆಡ್ಡಿ ಮತ್ತು ಹನಮಕೊಂಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನೀಡಿದ ಭರವಸೆ ಈಡೇರಿಲು ಬೀದಿನಾಯಿಗಳನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಪ್ರಾಣಿದಯ ಸಂಘದ ಅದುಲ್ ಪುರಂ ಗೌತಮ್ (35) ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಕಮರೆಡ್ಡಿ ಜಿಲ್ಲೆಯ ಭವಾನಿಪೇಟ್, ಪಲ್ವಾಂಚಾ, ಫರೀದ್ ಪೇಟ್, ವಾಡಿ ಮತ್ತು ಬಂಡಮೇಶ್ವರಪಳ್ಳಿ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಲ್ಲಿ 200ಕ್ಕೂ ಅಧಿಕ ಬೀದಿನಾಯಿಗಳನ್ನು ಹತ್ಯೆಗೈಯ್ಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಬೀದಿನಾಯಿಗಳನ್ನು ಸಾಮೂಹಿಕವಾಗಿ ಹತ್ಯೆಗೈಯ್ಯಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿಸಿ ಸದಸ್ಯರ ನೇತೃತ್ವದಲ್ಲಿ ಈ ಹತ್ಯೆಕಾಂಡ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜನವರಿ 12ರಂದು ಗೌತಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಭವಾನಿಪೇಟ್ ಗ್ರಾಮಕ್ಕೆ ಭೇಟಿ ನೀಡಿದಾಗ ದೇವಸ್ಥಾನಗಳ ಬಳಿ ನಾಯಿಗಳ ಶವಗಳನ್ನು ಎಸೆದಿರುವುದು ಕಂಡು ಬಂದಿದೆ. ಬಹುತೇಕ ನಾಯಿಗಳನ್ನು ವಿಷದ ಇಂಜೆಕ್ಷನ್ ಹಾಗೂ ವಿಷ ನೀಡಿ ಕೊಲ್ಲಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ರೀತಿ ನಾಯಿಗಳ ಮಾರಣಹೋಮ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬೀದಿನಾಯಿಗಳನ್ನು ರಕ್ಷಿಸಬೇಕು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.


