ಸಂಸತ್ತಿನಲ್ಲೂ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿಮಾತನಾಡಿದರು. ಈ ಹಿಂದೆ ರಾಜೀವಗಾಂಧಿ ಪ್ರಧಾನಮಂತ್ರಿ ಆಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ಸ್ಥಾನಮಾನ ಕೊಡುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅವಕಾಶ ನೀಡಲಾಯಿತು. ಅದರಿಂದ ಇದೀಗ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿ ಪ್ರಾಧಾನ್ಯತೆ ಸಿಕ್ಕಿದೆ ಎಂದು ಹೇಳಿದರು.
ಡಾ.ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಸಂಸತ್ತಿನಲ್ಲೂ ಶೇ.50 ಅವಕಾಶ ಕಲ್ಪಿಸುವ ಮಹಿಳಾ ಮಸೂದೆ ಮಂಡಿಸಲಾಯಿತು. ಆಗ ರಾಜ್ಯಸಭೆಯಲ್ಲಿ ಅದು ಅನುಮೋದನೆ ಆಗಲಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಈ ಮಸೂದೆಯನ್ನು ಅನುಮೋದಿಸಿ ಮಹಿಳೆಗೆ ಶಕ್ತಿ ನೀಡಬೇಕು ಎಂದರು.
ಇಡೀ ವಿಶ್ವದಲ್ಲಿ ಭಾರತದಲ್ಲಿಯೇ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿ ಸಬಲೀಕರಣಗೊಳಿಸಲಾಗಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಪುರುಷರನ್ನು ಹಿಂದಿಕ್ಕಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿಯೇ ಘೋಷಿಸಿದಂತೆ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಯಾರೂ ಅವಕಾಶಗಳನ್ನು ಕಾದು ಕೂರುವುದು ಸರಿಯಲ್ಲ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯವರು ಅತಿದೊಡ್ಡ ಜವಾಬ್ದಾರಿ ಹೊಂದಿರುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ದುಡಿಯಬೇಕಾಗುತ್ತದೆ. ಈ ನಡುವೆ ತಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕು . ಜಿಲ್ಲೆಯಲ್ಲಿ 2ವರ್ಷಗಳು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ಮು ಮಾಡಿದ್ದು, ಜಿಲ್ಲೆಯಲ್ಲಿ 1160 ಕಂದಾಯ ಗ್ರಾಮಗಳನ್ನು ಗುರುತಿಸಿದ್ದು, ಸದ್ಯದಲ್ಲೇ 22ಸಾವಿರ ಹಕ್ಕುಪತ್ರಗಳನ್ನು ನೀಡಲಿದ್ದೇವೆ. ಇದನ್ನು ನಾವು ಸೃಷ್ಟಿಕೊಂಡಿದ್ದೇವೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ನೂರುನ್ನಿಸಾ ಮಾತನಾಡಿ,ಮಹಿಳೆ ಪುರುಷರಿಗೆ ಸ್ಪರ್ಧಿಯಾಗುವುದು ಬೇಡ, ಮಹಿಳೆಯೇ ತಮ್ಮ ಆತ್ಮ ಸಂತೋಷಕ್ಕಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ ಎಂದರು.
ಇಂದಿನ ದಿನಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿದ್ದಾರೆ, ಆದರೆ ಆರ್ಥಿಕ ಸ್ವಾಲಂಭನೆಯನ್ನು ಅನುಭವಿಸುವ ಹಕ್ಕನ್ನು ಜಯಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ ಸಿ., ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶಾರದಮ್ಮ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೆಶಕಿ ಸೌಮ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.


