Thursday, October 09, 2025
Menu

ಜಿಬಿಎ ಪಾಲಿಕೆಗಳಲ್ಲಿ ಶೇ.50 ಮಹಿಳಾ ಕಾರ್ಪೊರೇಟರ್‌ಗಳು: ಡಿಕೆ ಶಿವಕುಮಾರ್

ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ ಗಳು ಇರುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (B.PAC) ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಬೆಂಗಳೂರು ಅಭಿವೃದ್ಧಿ, ಪರಿವರ್ತನೆ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಶಿವಕುಮಾರ್  ಮಾತನಾಡಿದರು.

ಹಲವಾರು ದಶಕಗಳಿಂದ ಬೆಂಗಳೂರಿನಲ್ಲಿ ಅನೇಕ ಸವಾಲುಗಳಿವೆ. ಜಿಬಿಎಯನ್ನು ಪರಿಚಯಿಸಲು ಇದು ಸೂಕ್ತ ಸಮಯ ಎಂದು ಅನಿಸಿದ್ದೇಕೆ ಎಂದು ಕೇಳಿದಾಗ, “ನಾವೆಲ್ಲರೂ ಬೆಂಗಳೂರಿನ ನಾಗರಿಕರು. ನಗರೀಕರಣ ಯಾವುದೇ ದೇಶ ಅಥವಾ ನಗರಕ್ಕೆ ದೊಡ್ಡ ಸವಾಲು. ಜನ ಬೆಂಗಳೂರಿಗೆ ವಲಸೆ ಬರುವುದು ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ. ಯಾವುದೇ ನಗರದ ಜನಸಂಖ್ಯೆ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್.ಎಂ ಕೃಷ್ಣ  ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿದೆ” ಎಂದರು.

“ಬೆಂಗಳೂರು ಯೋಜಿತ ನಗರವಲ್ಲ. ಅನೇಕ ವಿಚಾರಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಆಕರ್ಷಣೆಯಾಗಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದೆ ಎಂಬ ಕಾರಣಕ್ಕೆ ಇಲ್ಲಿ ಎಚ್ಎಎಲ್, ಐಟಿಐ, ಬೆಮೆಲ್ ಸೇರಿದಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿವೆ‌. ನಮ್ಮ ರಾಜ್ಯದಲ್ಲಿ 270ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು, 70 ಮೆಡಿಕಲ್ ಕಾಲೇಜು, 1,400 ನರ್ಸಿಂಗ್ ಕಾಲೇಜುಗಳಿವೆ. ಆದರೂ ಸಂಚಾರ, ಕಸ ವಿಲೇವಾರಿ, ಕುಡಿಯುವ ನೀರಿನಂತಹ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಪರಿಣಾಮಕಾರಿ ಆಡಳಿತ, ಪರಿಣಾಮಕಾರಿ ಸೇವೆ, ಸಮನ್ವಯತೆ ಸಾಧಿಸುವ ಉದ್ದೇಶದಿಂದ ಜಿಬಿಎ ಅಸ್ತಿತ್ವಕ್ಕೆ ತರಲಾಗಿದೆ. ನಾಗರಿಕರು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುವವರೆಗೂ ಬೆಂಗಳೂರಿನ ಪ್ರಗತಿ ಅಸಾಧ್ಯ” ಎಂದು ತಿಳಿಸಿದರು.

“ಬೆಂಗಳೂರು 198 ವಾರ್ಡ್ ಗಳೊಂದಿಗೆ ದೊಡ್ಡ ಪ್ರಮಾಣದಲ್ಲಿತ್ತು. ಎಲ್ಲಾ ವಾರ್ಡ್ ಗಳನ್ನು ನಿರ್ವಹಣೆ ಮಾಡಲು ಒಬ್ಬರೇ ಆಯುಕ್ತರಿದ್ದರು. ಒಬ್ಬರಿಂದ ಇಷ್ಟೆಲ್ಲಾ ನಿರ್ವಹಣೆ ಕಷ್ಟ. ಮುಂದಿನ 10-15 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ತಲುಪಲಿದೆ. ಸಂಚಾರ ದಟ್ಟಣೆ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿಭಾಯಿಸಲು ಮತ್ತು  ಉತ್ತಮ ಆಡಳಿತ ನೀಡಲು ಐದು ಪಾಲಿಕೆಗಳನ್ನು ಮಾಡಿ 368 ವಾರ್ಡ್ ಗಳನ್ನು ರಚಿಸಲಾಗಿದೆ. ಸ್ವಚ್ಛತೆ, ಸಂಚಾರ ಸುಧಾರಣೆಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಸಮಸ್ಯೆಗಳು ಮಾತ್ರ ದೊಡ್ಡದಾಗಿ ಸದ್ದು ಮಾಡಲಾಗಿದೆ. ನಮ್ಮಲ್ಲಿ ಮಾಧ್ಯಮಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಅವಕಾಶ ಇಲ್ಲ” ಎಂದು ತಿಳಿಸಿದರು.

ಕಸ ನಿರ್ವಹಣೆಯಲ್ಲಿ ಜನರಲ್ಲಿ ನಾಗರಿಕ ಪ್ರಜ್ಞೆ ಇರಬೇಕು

ಬೆಂಗಳೂರು ನಗರದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ, ಹೀಗಾಗಿ ಜಿಬಿಎ ಮೂಲಕ ಹೇಗೆ ಸಮನ್ವಯತೆ ಸಾಧಿಸಲಾಗುವುದು ಎಂದು ಕೇಳಿದಾಗ “ನಮಗೆ ಹಸಿರು ಹಾಗೂ ಸ್ವಚ್ಛ ಬೆಂಗಳೂರು ಬೇಕು. ಆದರೆ ಪ್ರತಿ ಮನೆಯಲ್ಲಿ ಎರಡು ಮೂರು ವಾಹನಗಳಿವೆ. ಮನೆಯೊಳಗೆ ನಿಲ್ಲಿಸಲು ಜಾಗವಿಲ್ಲ ಎಂದು ರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಬೆಂಗಳೂರಿನ ಜನರಲ್ಲಿ ಒಂದು ವರ್ಗ ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ನೋಡಿದರೆ, ಮತ್ತೆ ಕೆಲವು ವರ್ಗಗಳಿಗೆ ಜ್ಞಾನ ಇಲ್ಲ. ಕೆಲವರು ವಾಹನದಲ್ಲಿ ಕಸ ತಂದು ರಸ್ತೆಯಲ್ಲಿ ಹಾಕಿ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಏನು ಮಾಡಲು ಸಾಧ್ಯ. ಹೀಗಾಗಿ ಜನರಲ್ಲಿ ನಾಗರಿಕ ಪ್ರಜ್ಞೆ ಬಹಳ ಮುಖ್ಯ. ಬೆಂಗಳೂರಿನ ಹೊರ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದಾರೆ. ಹೀಗಾಗಿ ಈ ರೀತಿ ಕಸ ಎಸೆಯುವ ಎಲ್ಲಾ ವಾಹನ ಮಾಲೀಕರಿಗೆ ನೋಟೀಸ್ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಕಸ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕಸದ ಮಾಫಿಯಾ ನನ್ನ ಪ್ರಯತ್ನ ತಡೆಯುತ್ತಿವೆ. ನ್ಯಾಯಾಲದಲ್ಲಿ ಪಿಐಎಲ್ ಹಾಕಿ ನಮ್ಮನ್ನು ತಡೆಯುತ್ತಿದ್ದಾರೆ” ಎಂದು ತಿಳಿಸಿದರು.

ಜನ ಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಲು ಕೇಳಲು ಯಾವುದಾದರೂ ಕ್ರಮ ಕೈಗೊಂಡಿದ್ದೀರಾ ಎಂದು ಕೇಳಿದಾಗ, “ಸದ್ಯಕ್ಕೆ 368 ವಾರ್ಡ್ ರಚಿಸಲಾಗಿದ್ದು, ಪ್ರತಿ ವಾರ್ಡ್ ನಲ್ಲಿ ವಾರ್ಡ್ ಸಮಿತಿ ರಚಿಸಲಾಗುವುದು. ಇದರಲ್ಲಿ ಎಲ್ಲಾ ವರ್ಗದ ಜನರಿಗೆ ಅವಕಾಶ ಮಾಡಿಕೊಡಲಾಗುವುದು. ಅವರು ಚರ್ಚೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಜನರು ವಾರ್ಡ್ ಮಟ್ಟದ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿರಬೇಕು. ಅವರನ್ನು ಪ್ರಶ್ನೆ ಮಾಡುವಂತಿರಬೇಕು. ಜನರು ಸಂತೋಷವಾಗಿದ್ದರೆ ನಾವು ಸಂತೋಷವಾಗಿರುತ್ತೇವೆ. ಅವರು ತೆರಿಗೆ ಪಾವತಿದಾರರು ಅವರ ಕೊಡುಗೆ ಬಹಳ ಮುಖ್ಯವಾಗಿದೆ” ಎಂದರು.

ಪಾರದರ್ಶಕತೆಗೆ ಆದ್ಯತೆ

ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಕೂಡ ದೊಡ್ಡ ಸಮಸ್ಯೆಯಾಗಿದ್ದು ಜಿಬಿಎ ಇದನ್ನು ಹೇಗೆ ನಿಭಾಯಿಸಲಿದೆ ಎಂದು ಕೇಳಿದಾಗ, “ಭ್ರಷ್ಟಾಚಾರ ನಿಯಂತ್ರಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮನೆ ಕಟ್ಟಬೇಕಾದರೆ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಕಚೇರಿ ಹಾಗೂ ಅಧಿಕಾರಿಗಳ ಸುತ್ತ ಅಲೆಯಬೇಕಾಗುತ್ತಿತ್ತು. ಹೀಗಾಗಿ ನಂಬಿಕೆ ನಕ್ಷೆ ಯೋಜನೆ ಜಾರಿಗೆ ತಂದಿದ್ದು 50X80 ನಿವೇಶನದಲ್ಲಿ ಮನೆ ಕಟ್ಟುವವರು ನಿಯೋಜಿತ ಇಂಜಿನಿಯರ್ ಗಳ ಬಳಿ ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯಬಹುದು. ಈ ಹಿಂದೆ ತೆರಿಗೆ ಪಾವತಿಗೆ ಸ್ವಯಂ ಘೋಷಣೆ ಯೋಜನೆ ಅವಕಾಶ ನೀಡಿದೆವು. ಕೇವಲ 10% ಜನ ಮಾತ್ರ ತಮ್ಮ ಆಸ್ತಿ ಮೌಲ್ಯವನ್ನು ಸರಿಯಾಗಿ ಪ್ರಕಟಿಸಿದರು. ಉಳಿದವರು ಸ್ಥಳೀಯ ಅಧಿಕಾರಿಗಳ ಜೊತೆಗೂಡಿ ತಮ್ಮ ಆಸ್ತಿ ಮೌಲ್ಯಕ್ಕಿಂತ ಕಡಿಮೆ ತೋರಿಸಿ ತೆರಿಗೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ನಾವು ಬೆಂಗಳೂರಿನ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದು, ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಪತ್ತೆ ಮಾಡುತ್ತಿದ್ದೇವೆ. ದೆಹಲಿಯಲ್ಲಿ ತೆರಿಗೆ ಮೂಲಕ ಸಂಗ್ರಹವಾಗುವ ಆದಾಯ ಕೇವಲ 2 ಸಾವಿರ ಕೋಟಿ ಮಾತ್ರ. ಆದರೆ ನಮ್ಮ ಸರ್ಕಾರ ಬಂದ ನಂತರ ನಾವು ಓಟಿಎಸ್ ಅವಕಾಶ ಕಲ್ಪಿಸಿದ ಕಾರಣಕ್ಕೆ ಬೆಂಗಳೂರಿನಲ್ಲಿ ತೆರಿಗೆ ಸಂಗ್ರಹ 6-7 ಸಾವಿರ ಕೋಟಿಗೆ ತಲುಪಿದೆ. ಬೆಂಗಳೂರಿನ ರಸ್ತೆಗುಂಡಿ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ದೆಹಲಿಯಲ್ಲಿರುವ ನನ್ನ ಮನೆ ಮುಂದಿನ ರಸ್ತೆಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲೇ 70 ರಸ್ತೆಗುಂಡಿಗಳಿವೆ. ಆದರೂ ದೆಹಲಿ ಹಾಗೂ ಇತರೆ ನಗರಗಳಲ್ಲಿರುವ ರಸ್ತೆಗುಂಡಿಗಳು ಸುದ್ದಿಯಾಗುವುದಿಲ್ಲ” ಎಂದು ವಿವರಿಸಿದರು.

10-15 ವರ್ಷಗಳಲ್ಲಿ ನನ್ನ ಸಾಧನೆಯನ್ನು ಜನ ಸ್ಮರಿಸುತ್ತಾರೆ

ರಸ್ತೆಗುಂಡಿ ಎಲ್ಲಾ ನಗರಗಳಲ್ಲೂ ಇವೆ. ಆದರೂ ಬೆಂಗಳೂರಿನ ಬಗ್ಗೆ ಹೆಚ್ಚು ಟೀಕೆಗಳಾಗುತ್ತಿವೆ ಎಂದು ಕೇಳಿದಾಗ, “ನಾನು ಟೀಕೆಗಳನ್ನು ಸ್ವಾಗತಿಸುತ್ತೇನೆ. ರಾಜಕಾರಣಿಗಳು ಟೀಕೆಗಳಿಗೆ ಹೆದರಬಾರದು. ಜನರ ಧ್ವನಿಯನ್ನು ಆಲಿಸಬೇಕು. ಜನ ಟೀಕೆ ಮಾಡಿದಾಗ ಮಾತ್ರ ನಾವು ನಮ್ಮ ತಪ್ಪು ತಿದ್ದಿಕೊಳ್ಳಲು ಸಾಧ್ಯ. ಇಡೀ ದೇಶದಲ್ಲಿ ಯಾವುದೇ ನಗರದ ಸಚಿವರು ತಮ್ಮ ಸಾರ್ವಜನಿಕರಿಗೆ ಕರೆ ನೀಡಿ ರಸ್ತೆ ಗುಂಡಿ, ಕಸ ಬಗ್ಗೆ ಮಾಹಿತಿ ನೀಡಿ ಎಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರಾ? ಆ ಕೆಲಸವನ್ನು ನಾವು ಮಾಡಿದ್ದೇನೆ. ಪರಿಣಾಮ ನಮ್ಮ ಅಧಿಕಾರಿಗಳಿಗೆ 13 ಸಾವಿರ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವುಗಳನ್ನು ಮುಚ್ಚುತ್ತಿದ್ದೇವೆ. ಇದು ತಕ್ಷಣವೇ ಬಗೆಹರಿಯುವುದಿಲ್ಲ. ನಾನು ಈ ಇಲಾಖೆ ಜವಾಬ್ದಾರಿಯನ್ನು ಬಹಳ ಆಸಕ್ತಿಯಿಂದ ವಹಿಸಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ಓದಿ, ವಾಸ ಮಾಡಿ, ಕೆಲಸ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಬೆಂಗಳೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ಪಣತೊಟ್ಟಿದ್ದೇನೆ. ನನ್ನ ಕೆಲಸಗಳು ಇಂದು ಜನರ ಕಣ್ಣಿಗೆ ಕಾಣದೇ ಇರಬಹುದು. ಆದರೆ ಆದರೆ ಮುಂದಿನ 10 ವರ್ಷಗಳ ನಂತರ ಬೆಂಗಳೂರಿಗೆ ನನ್ನ ಕೊಡುಗೆ ಏನು ಎಂದು ಅರ್ಥವಾಗುತ್ತದೆ. ಜನ ನನ್ನನ್ನು ಸ್ಮರಿಸುತ್ತಾರೆ” ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *