ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಜೂನ್ ತಿಂಗಳಲ್ಲಿ ಭರ್ತಿಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮುಂಗಾರು ಮಳೆ ಬಿರುಸುಗೊಂಡಿರುವ ಕಾರಣ ಅಣೆಕಟ್ಟೆಗೆ 44,238 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯಿಂದ 50 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಇರುವುದರ ಜೊತೆಗೆ ಆಸ್ತಿ- ಪಾಸ್ತಿ, ಜಾನುವಾರುಗಳ ರಕ್ಷಣೆ ಸಂಬಂಧ ಅಲರ್ಟ್ ಘೋಷಣೆ ಮಾಡಿದೆ. ನದಿ ಪಾತ್ರದಲ್ಲಿ ಇರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ.
ವೆಲ್ಲೆಸ್ಲಿ ಡ್ಯಾಂ ಮುಳುಗುವ ಹಂತದಲ್ಲಿದೆ, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ನಿಮಿಷಾಂಭ ದೇಗುಲದ ಬಳಿ ಬ್ಯಾರಿಕೇಡ್ ಹಾಕಿ ಭದ್ರತೆ ಕಲ್ಪಿಸಲಾಗಿದೆ. ದೇಗುಲದ ಬಳಿ ಭಕ್ತರ ಸ್ನಾನಗೃಹಗಳು ಜಲಾವೃತಗೊಂಡಿದ್ದು, ಭಕ್ತರಿಗೆ ನದಿ ಬಳಿ ತೆರಳದಂತೆ ದೇಗುಲ ಆಡಳಿತ ಮಂಡಳಿ ಸೂಚನೆ ನೀಡಿದೆ.
ಅಣೆಕಟ್ಟೆ ಜೂನ್ ತಿಂಗಳಲ್ಲಿಯೇ ಭರ್ತಿಯಾಗಿರುವುದರಿಂದ ಇನ್ನು ಬರುವ ಒಳಹರಿವನ್ನು, ಹೊರಹರಿಸಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಕೇರಳದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಹಾಸನದಲ್ಲೂ ಧಾರಾಕಾರ ಮಳೆಯಾಗುತ್ತಿದೆ.