2025-26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್ ಸೇರಿದಂತೆ ಸಹಶಿಕ್ಷಣ ಹೊಂದಿರುವ ರಾಜ್ಯದ ಎಲ್ಲಾ ಖಾಸಗಿ ಶಾಲೆ ಗಳಲ್ಲೂ ಶೇ.50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯ ಮೀಸಲಿಡಬೇಕು ಎಂದು ಸೂಚಿಸಿದೆ.
ಸಹಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಒಟ್ಟು ಪ್ರವೇಶದಲ್ಲಿ ಶೇ.50ರಷ್ಟು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು. ಶೇ.50ರಷ್ಟು ಸೀಟುಗಳ ಪ್ರವೇಶಕ್ಕೆ ಹೆಣ್ಣು ಮಕ್ಕಳು ದೊರೆಯದೆ ಹೋದಲ್ಲಿ ಉಳಿಯುವ ಸೀಟುಗಳನ್ನು ಮೀಸಲಾತಿ ನಿಯಮದಂತೆ ಗಂಡು ಮಕ್ಕಳಿಗೆ ನೀಡಬೇಕು ಎಂದು ಇಲಾಖೆಯ ಆಯುಕ್ತ ತ್ರಿಲೋಕ್ ಚಂದ್ರ ಹೇಳಿದ್ದಾರೆ.
ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿ, ಪೋಷಕರ ಪರೀಕ್ಷೆ ಅಥವಾ ಸಂದರ್ಶನ ನಡೆಸುವುದು ಕಾನೂನು ಬಾಹಿರ. ಪ್ರತಿ ಶಾಲೆಯೂ ನಿಗದಿತ ಶುಲ್ಕ ಮೊತ್ತ ಸಾರ್ವಜನಿಕ ಮಾಹಿತಿಗೆ ಶಾಲೆಯ ನೋಟಿಸ್ ಬೋರ್ಡ್, ಜಾಲತಾಣ ಮತ್ತು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಪ್ರಕಟಿಸಬೇಕು. ಶಾಲೆ ಮಾಹಿತಿ ಪುಸ್ತಕದಲ್ಲೂ ಮುದ್ರಿಸಬೇಕೆಂದು. ಕ್ಯಾಪಿಟೇಷನ್ ಶುಲ್ಕವಸೂಲಿ ಮಾಡುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಗೂ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ವಿಶೇಷ ಚೇತನ ಮಕ್ಕಳಿಗೆ ನಿಯಮಾನುಸಾರ ದಾಖಲಾತಿಗೆ ಅವಕಾಶ ಕಲ್ಪಿಸಬೇಕು. ಎಸ್ಸಿ, ಎಸ್ಟಿ ಮಂಡಳಿಗಳಿಂದ ನಡೆಯುತ್ತಿರುವ ಅನುದಾನಿತ ಶಾಲೆಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಆ ಸಮುದಾಯದ ಮಕ್ಕಳಿಗೆ ನೀಡಬೇಕು. ಯಾವುದೇ ಶಾಲೆ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.