ಆಫ್ರಿಕಾ ಖಂಡದ ಕಾಂಗೊದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ 50 ಮಂದಿ ಅಸುನೀಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸೋಂಕು ಕಾಣಿಸಿಕೊಂಡ 48 ಗಂಟೆಗಳಲ್ಲಿ ಜನರು ಸಾಯುತ್ತಿರುವುದು ಚಿಂತೆಗೀಡು ಮಾಡಿದ್ದು, ಘಟನಾ ಸ್ಥಳಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಹಾಗೂ ಸ್ಥಳೀಯ ವೈದ್ಯರು ಬೀಡು ಬಿಟ್ಟಿದ್ದು ರೋಗ ಲಕ್ಷಣಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಜನವರಿ 21 ರಂದು ಮೊದಲ ಬಾರಿ ಈ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ 419 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 53 ಮಂದಿ ಅಸುನೀಗಿದ್ದಾರೆ.
ಬೊಲೊಕೊ ನಗರದಲ್ಲಿ ಮೊದಲ ಬಾರಿ ಈ ಸೋಂಕು ಕಾಣಿಸಿಕೊಂಡಿದ್ದು, ಮೂವರು ಮಕ್ಕಳು ಬಾವುಲಿಯನ್ನು ಕೊಂದು ತಿಂದ ನಂತರ ಈ ಸೋಂಕು ಕಾಣಿಸಿಕೊಂಡಿದ್ದು, ಈ ಮಕ್ಕಳಲ್ಲಿ ಕೆಲವೇ ಗಂಟೆಗಳಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದು, 48 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ.
ದಟ್ಟ ಕಾಡಿನಿಂದ ಆವರಿಸಿರುವ ಕಾಂಗೊನಂತಹ ಪ್ರದೇಶಗಳಲ್ಲಿ ಮಾಂಸಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಅಲ್ಲದೇ ಹಲವು ರೀತಿಯ ಪ್ರಾಣಿ-ಪಕ್ಷಿಗಳನ್ನು ಸೇವಿಸುವುದರಿಂದ ಕಾಯಿಲೆಗಳು ವೇಗವಾಗಿ ಹರಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಫೆಬ್ರವರಿ ೯ರಿಂದ ಎರಡನೇ ಹಂತದಲ್ಲಿ ಸೋಂಕು ಹರಡಲು ಪ್ರಾರಂಭವಾಗಿದೆ. ಕಿನ್ಶಾಸಾ ನಗರದಲ್ಲಿ ಸೋಂಕಿತರು ಪತ್ತೆಯಾಗಿದ್ದು, ಇದುವರೆಗೆ 13 ಪ್ರಕರಣಗಳು ವರದಿಯಾಗಿವೆ.
ಸೋಂಕಿತರ ಮಾದರಿಗಳನ್ನು ಪರಿಶೀಲಿಸಲಾಗಿದ್ದು, ಎಬೊಲಾ, ಮಲೇರಿಯಾ ಮುಂತಾದ ಹಲವು ಕಾಯಿಲೆಗಳ ಮಾದರಿಗೆ ಹೋಲಿಕೆ ಆಗಿಲ್ಲ. ಈ ಸೋಂಕಿನ ರೋಗ ಲಕ್ಷಣಗಳು ಪೂರ್ಣ ಪ್ರಮಾಣದಲ್ಲಿ ತಿಳಿಯಲು ತಜ್ಞರು ಪ್ರಯತ್ನಿಸುತ್ತಿದ್ದಾರೆ.