Saturday, February 28, 2026
Menu

ಅಂಗನವಾಡಿ ಮಕ್ಕಳಿಗೆ ತರಕಾರಿಗಾಗಿ 50 ಪೈಸೆ: ಆರ್‌ ಅಶೋಕ ಟೀಕೆ

ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬೊಕ್ಕಸ ಖಾಲಿಯಾಗಿರುವುದರಿಂದ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ತರಕಾರಿಗೆ 50 ಪೈಸೆ ನೀಡುತ್ತಿದ್ದಾರೆ. ಅಂದರೆ ಹತ್ತು ಮಕ್ಕಳಿಗೆ 5 ರೂ. ನೀಡಲಾಗುತ್ತದೆ. ಅರ್ಧ ಕೆಜಿ ತರಕಾರಿಯನ್ನು ಹತ್ತು ಮಕ್ಕಳಿಗೆ ನೀಡಬೇಕಾಗುತ್ತದೆ. ಆದರೆ ಒಂದು ಕೆಜಿ ತರಕಾರಿಗೆ ಕನಿಷ್ಠ 40 ರೂ. ಇದೆ. ಗ್ಯಾರಂಟಿಗಳಿಂದಾಗಿ ಹಣವಿಲ್ಲದೆ ಇಷ್ಟು ದರದಲ್ಲಿ ತರಕಾರಿ ಖರೀದಿ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನು ಪಾಪರ್‌ ಮಾಡಲು ಮುಂದಾಗಿದೆ. ಇದರಿಂದಾಗಿ ಎಲ್ಲರೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ, ಸಿಎಂ ಕುರ್ಚಿ ಕಾಳಗ, ಅನುದಾನ ಕೊರತೆ ಮೊದಲಾದ ಸಾವಿರಾರು ಸಮಸ್ಯೆಗಳಲ್ಲೇ ಕಾಂಗ್ರೆಸ್ ಸರ್ಕಾರದ ಸಾವಿರದ ದಿನಗಳು ಕಳೆದುಹೋಗಿದೆ. ಸರ್ಕಾರಿ ಆಸ್ಪತ್ರೆಗಳಿಗಾಗಿ ಇನ್ನೂ ಅಗತ್ಯ ಔಷಧಿಗಳನ್ನು ಖರೀದಿ ಮಾಡಿಲ್ಲ. ಈ ನಡುವೆ, ಸ್ಥಳೀಯ ವೈದ್ಯಾಧಿಕಾರಿಗಳು ಔಷಧಿ ಖರೀದಿಸುವುದು ಬೇಡ, ಸರ್ಕಾರದಿಂದಲೇ ಖರೀದಿಸುವವರೆಗೆ ಕಾಯಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ಮಾರ್ಚ್ 13 ರಿಂದ ಸರ್ಕಾರಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.  ರೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇರ ಕಾರಣ ಎಂದರು‌.

ಆರೋಗ್ಯ ಇಲಾಖೆಯೇ ಅನಾರೋಗ್ಯ ಪೀಡಿತವಾಗಿದ್ದು, ಬಜೆಟ್ ನಲ್ಲಿ 40% ಅನುದಾನ ಕಡಿತವಾಗಿದೆ. ಗ್ಯಾರಂಟಿಗಳು ಹೊರೆಯಾಗುತ್ತಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಎಲ್ಲ ಇಲಾಖೆಗಳಲ್ಲಿ ಅನುದಾನ ಕೊರತೆಯಾಗಿದೆ. ಇ-ಖಾತೆಯನ್ನು ಉಚಿತವಾಗಿ ಸರ್ಕಾರದಿಂದಲೇ ಮಾಡಬೇಕಿತ್ತು. ಅದನ್ನು ಬಿಟ್ಟು ಲಂಚಕ್ಕೆ ದಾರಿ ಮಾಡಿದ್ದಾರೆ. ಇ-ಖಾತಾ ಮಾಡಿಸಲು 30,000 ರೂ. ಲಂಚ ನೀಡಬೇಕಿದೆ. ನಿಗದಿತ ಗುರಿಗಿಂತ 20% ನಷ್ಟು ಆದಾಯ ಖೋತಾ ಆಗಿದೆ. ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿ ಆರಂಭಿಸಲು ಕೋಟಿಗಟ್ಟಲೆ ಹಣ ನೀಡಬೇಕಿದೆ. ಮಹಾತ್ಮ ಗಾಂಧಿಯ ಆದರ್ಶಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ನಾಯಕರು ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲಂಚ ಪಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಸಚಿವರ ಬದಲಾವಣೆಯ ಸುದ್ದಿ ಬಂದರೆ ಸಚಿವರು ಹೈಕಮಾಂಡ್‌ಗೆ ಹಣ ನೀಡಬೇಕಾಗುತ್ತದೆ. ಡಿಕೆಶಿವಕುಮಾರ್, ಜಾರ್ಜ್ ಮೊದಲಾದವರನ್ನು ಚುನಾವಣೆಗೆ ನೇಮಿಸಲಾಗಿದೆ. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ. ಇದರ ಪರಿಣಾಮ ಪ್ರತಿಭಟನೆಯ ಪರ್ವ ಶುರುವಾಗಿದೆ. ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬೊಕ್ಕಸ ಖಾಲಿಯಾಗಿ ರುವುದರಿಂದ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ತರಕಾರಿಗೆ 50 ಪೈಸೆ ನೀಡುತ್ತಿದ್ದಾರೆ. ಅಂದರೆ ಹತ್ತು ಮಕ್ಕಳಿಗೆ 5 ರೂ. ನೀಡಲಾಗುತ್ತದೆ. ಅರ್ಧ ಕೆಜಿ ತರಕಾರಿಯನ್ನು ಹತ್ತು ಮಕ್ಕಳಿಗೆ ನೀಡಬೇಕಾಗುತ್ತದೆ. ಆದರೆ ಒಂದು ಕೆಜಿ ತರಕಾರಿಗೆ ಕನಿಷ್ಠ 40 ರೂ. ಇದೆ. ಗ್ಯಾರಂಟಿಗಳಿಂದಾಗಿ ಹಣವಿಲ್ಲದೆ ಇಷ್ಟು ದರದಲ್ಲಿ ತರಕಾರಿ ಖರೀದಿ ಮಾಡಬೇಕಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಹಿಂದಿನ ಯಾವುದೇ ಮುಖ್ಯಮಂತ್ರಿ ಇಷ್ಟು ಸಾಲ ಮಾಡಿಲ್ಲ. ಐದು ವರ್ಷ ಪೂರ್ಣಗೊಳ್ಳುವಾಗ ಒಟ್ಟು ಸಾಲ 6 ಲಕ್ಷ ಕೋಟಿ ರೂ.ಗೆ ಏರಲಿದೆ. ಪ್ರತಿ ವ್ಯಕ್ತಿಯ ಮೇಲೆ 1 ಲಕ್ಷ ರೂ. ಸಾಲವಿದ್ದು, ಇನ್ನೂ 1 ಲಕ್ಷ ರೂ. ಸಾಲ ಹೇರಿಕೆಯಾಗಲಿದೆ. ಜನರ ಮೇಲೆ ಸಾಲ ಮತ್ತು ತೆರಿಗೆಗಳ ಹೊರೆಯನ್ನು ಹಾಕಿದ್ದಾರೆ. ಕೇಂದ್ರ ಸರ್ಕಾರ ತುಪ್ಪದ ದರ ಇಳಿಸಿದರೆ, ಕೂಡಲೇ ತುಪ್ಪದ ದರ ಹೆಚ್ಚು ಮಾಡಿದ್ದಾರೆ. ಮಾರ್ಗಸೂಚಿ ದರವನ್ನು ನಾಲ್ಕು ಪಟ್ಟು ಏರಿಸಿದ್ದಾರೆ. ಕಸಕ್ಕೆ ಮೂರು ಪಟ್ಟು ಅಧಿಕ ತೆರಿಗೆ ನೀಡಬೇಕಿದೆ. ಕಾಂಗ್ರೆಸ್‌ ದಿವಾಳಿಯಾಗಿ ಕರ್ನಾಟಕವನ್ನು ಪಾಪರ್‌ ರಾಜ್ಯ ಮಾಡಲು ಮುಂದಾಗಿದೆ ಎಂದು ಅಶೋಕ ಕಿಡಿ ಕಾರಿದರು.

ಬಜೆಟ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಮಾಡಿರುವ ತಪ್ಪುಗಳ ಬಗ್ಗೆ ಚರ್ಚೆಯಾಗಲಿದೆ. ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಹೋರಾಟ ಮಾಡಲಿದೆ. ಸಿಎಂ ಸಿದ್ದರಾಮಯ್ಯನವರ ಆಡಳಿತದಿಂದಾಗಿ ಹಿಂದುಳಿದ ತಾಲೂಕುಗಳ ಪಟ್ಟಿಗೆ ಇನ್ನೂ 20 ತಾಲೂಕುಗಳು ಸೇರ್ಪಡೆಯಾಗಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಹೆದರಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ. ಆದರೆ ಬಿಜೆಪಿಯಿಂದ 2 ಲಕ್ಷ ಹುದ್ದೆಗಳ ನೇಮಕಾತಿಗೆ ಆಗ್ರಹಿಸಲಾಗಿತ್ತು. ಒಳಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ಸರ್ಕಾರ ಅಫಿಡವಿಟ್‌ ನೀಡಬೇಕಿದೆ. ಕೋರ್ಟ್‌ ಆದೇಶದಂತೆ ಸರ್ಕಾರ ಕ್ರಮ ವಹಿಸಬೇಕಾಗುತ್ತದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಹಿಂದೂ ಸಮಾಜೋತ್ಸವದ ಹಿಂದಿನ ದಿನ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಕಾಂಗ್ರೆಸ್‌ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುತ್ತಿದೆ. ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆಗೆ ಕಲ್ಲು ತೂರಾಟ ಮಾಡಲಾಗಿತ್ತು. ಎಲ್ಲ ಜಿಲ್ಲೆಗಳ ಹಿಂದೂ ಕಾರ್ಯಕ್ರಮಗಳ ಮೇಲೆ ಕಲ್ಲು ತೂರಾಟವಾಗುತ್ತಿದೆ. ಕಾಂಗ್ರೆಸ್‌ ಇದನ್ನು ಮಾಡಿಸುತ್ತಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಲ್ಲಿ ಬಿಜೆಪಿ ನಡೆಸಿದ ಹೋರಾಟದಿಂದಲೇ ಬದಲಾವಣೆ ಸಾಧ್ಯವಾಗಿದೆ. ರಾಜ್ಯದಲ್ಲಿ ಎಲ್ಲೇ ಏನೇ ಆದರೂ ಹೋರಾಟ ಮಾಡುತ್ತೇವೆ ಎಂದರು.  ಸಿದ್ದರಾಮಯ್ಯ ಕುರ್ಚಿ ಬಿಡುವ ರಾಮಯ್ಯ ಅಲ್ಲ. ಇವರೆಲ್ಲರೂ ಸೇರಿ ಡಿಕೆಶಿವಕುಮಾರ್‌ಗೆ ನಾಮ ಹಾಕುತ್ತಾರೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *