ಪೂರ್ವ ಇರಾಕ್‌ನ ಕುಟ್ ನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಏಕಾಏಕಿ ಬೆಂಕಿ ಹೊತಿಕೊಂಡ ಪರಿಣಾಮವಾಗಿ 50 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾಲ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ವಾಸಿಟ್ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ.
ಈ ಪ್ರಾಂತ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ. ಕಟ್ಟಡ ಮತ್ತು ಮಾಲ್ ಮಾಲೀಕರ ವಿರುದ್ಧ ದೂರು ದಾಖಲಿಸುವಂತೆ ಗರ್ವನರ್ ಸೂಚಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳು ಅಲ್-ಕುಟ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತಿದೆ.
ಬೆಂಕಿ ಅವಘಡಕ್ಕೆ ಕಾರಣ ತಿಳಿದಿಲ್ಲ, ತನಿಖೆಯ ವಿವರ 48 ಗಂಟೆಗಳ ಒಳಗೆ ಪ್ರಕಟಿಸಲಾಗುವುದು ಎಂದು ರಾಜ್ಯಪಾಲರು ಹೇಳಿದ್ದಾಗಿ ಮಾಧ್ಯಮ ವರದಿ ಮಾಡಿದೆ. ಸಂತ್ರಸ್ತರಲ್ಲಿ ಒಬ್ಬರ ಗುರುತು ಪತ್ತೆ ಕಷ್ಟಕರವಾಗಿ ಪರಿಣಮಿಸಿದೆ ಎಂದು ನಗರ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.