ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ಒಂದೇ ವಾರದಲ್ಲಿ ದಾಖಲೆಯ 21.86 ಕೋಟಿ ರೂ. ಸಂಗ್ರಹವಾಗಿದೆ.
ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು 21 ಕೋಟಿ 86 ಸಾವಿರ ರೂ. ದಂಡ ಪಾವತಿಸಿದ್ದಾರೆ. ಇದರೊಂದಿಗೆ ಶೇ.50 ರಿಯಾಯಿತಿ ಸೌಲಭ್ಯವನ್ನು ಬಳಸಿಕೊಂಡ ವಾಹನ ಸವಾರರು ಕ್ಲಿಯರ್ ಮಾಡಿಕೊಂಡಿದ್ದಾರೆ.
ರಿಯಾಯಿತಿ ಘೋಷಣೆ ಮಾಡಿದ ಒಂದು ವಾರದಲ್ಲಿ ಅಂದರೆ ಆಗಸ್ಟ್ 23ರಿಂದ ಆಗಸ್ಟ್ 29ರವರೆಗೆ 7,43,160 ಬಾಕಿ ಪ್ರಕರಣಗಳು ದಂಡ ಪಾವತಿಯೊಂದಿಗೆ ಇತ್ಯರ್ಥಗೊಳಿಸಲಾಗಿದೆ.
ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದ್ದು, 6 ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.
ಬೆಂಗಳೂರು ವ್ಯಾಪ್ತಿಗೆ ಮಾತ್ರ ಈ ರಿಯಾಯಿತಿ ನೀಡಲಾಗಿದ್ದು, ವಾಹನ ಸವಾರರ ಪ್ರತಿಕ್ರಿಯೆ ಗಮನಿಸಿ ರಾಜ್ಯದ ಉಳಿದ ಜಿಲ್ಲೆಗಳಿಗೂ ವಿಸ್ತರಣೆ ಮಾಡುವ ಬಗ್ಗೆ ಆರ್ ಟಿಓ ಅಧಿಕಾರಿಗಳು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
10 ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶವಿದೆ. 2019ರಿಂದ ಸಂಗ್ರಹವಾಗಿರುವ ಸುಮಾರು 3 ಕೋಟಿ ಬಾಕಿ ಕೇಸ್‌ಗಳ ಪೈಕಿ ಈ ಸಂಖ್ಯೆ ಗಮನಾರ್ಹವಾಗಿದೆ. ಒಟ್ಟು 1,100 ಕೋಟಿ ಬಾಕಿ ದಂಡವಿದೆ ಎಂದು ಮೂಲಗಳು ತಿಳಿದುಬಂದಿದ್ದು, ಸುಮಾರು 50 ಕೋಟಿಯಷ್ಟು ದಂಡ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ಆಗಸ್ಟ್ 21, 2025 ರಂದು ಮೊದಲ ಬಾರಿ ಶೇ.50 ರಿಯಾಯಿತಿ ಯೋಜನೆ ಘೋಷಿಸಿತ್ತು. ಫೆಬ್ರವರಿ 11, 2023ಕ್ಕಿಂತ ಮೊದಲಿನ ಎಲ್ಲಾ ಬಾಕಿ ಇ-ಚಲನ್‌ಗಳಿಗೆ ಅನ್ವಯಿಸುತ್ತದೆ. ಈ ರಿಯಾಯಿತಿಯು ವಾಹನ ಮಾಲೀಕರಿಗೆ ತಮ್ಮ ದಂಡವನ್ನು ಅರ್ಧದಷ್ಟು ಬೆಲೆಗೆ ಪಾವತಿಸಲು ಅವಕಾಶ ನೀಡುತ್ತದೆ. ಉದಾಹರಣೆಗೆ 1000 ದಂಡವಿದ್ದರೆ, ಕೇವಲ 500 ಪಾವತಿಸಿದರೆ ಸಾಕು. ಈ ಯೋಜನೆಯು ಸೆಪ್ಟೆಂಬರ್ 12, 2025ರವರೆಗೆ ಮಾತ್ರ ಲಭ್ಯವಿದ್ದು, ಆನಂತರ ಪೂರ್ಣ ದಂಡವನ್ನು ಪಾವತಿಸಬೇಕಾಗುತ್ತದೆ.
ರಿಯಾಯಿತಿ ಯೋಜನೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಹಳೇ ಕೇಸಿನ ಬಾಕಿ ದಂಡವನ್ನು ಪಾವತಿಸುತ್ತಿದ್ದಾರೆ. ಮೊದಲ ದಿನವೇ (ಆಗಸ್ಟ್ 23) 1,48,747 ಕೇಸ್‌ಗಳನ್ನು ತೆರವುಗೊಳಿಸಲಾಗಿದ್ದು, ಇದಿರಂದ 4.18 ಕೋಟಿ ರೂ. ದಂಡದ ಹಣ ಸಂಗ್ರಹವಾಗಿತ್ತು.