Menu

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿಕೆ ಶಿವಕುಮಾರ್

dk shivakumar

ಜೇವರ್ಗಿ: ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದೆ. ಅಷ್ಟೇ ಅಲ್ಲದೇ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ಆ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜೇವರ್ಗಿಯಲ್ಲಿ ಸೋಮವಾರ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಇಂದು ಜೇವರ್ಗಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ನಾವು ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ನಡೆದಿದ್ದು, ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ವಿಧಾನಸಭೆ ಸದಸ್ಯರು ಹಾಗೂ ಲೋಕಸಭೆ ಸದಸ್ಯರನ್ನು ಆಯ್ಕೆ ಮಾಡಿದ್ದೀರಿ. ಆಮೂಲಕ ರಾಜ್ಯದಲ್ಲಿ ನಮಗೆ ದೊಡ್ಡ ಶಕ್ತಿ ನೀಡಿದ್ದು, ನಿಮಗೆ ನಮಿಸುತ್ತೇನೆ. 1 ಸಾವಿರ ಕೋಟಿ ಹಣವನ್ನು ಈ ಒಂದು ಕ್ಷೇತ್ರಕ್ಕೆ ಮಾತ್ರ ನೀಡಲಾಗಿದೆ. ಇತ್ತೀಚೆಗೆ ನಾಲ್ಕೈದು ಬಾರಿ ನಾನು ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿದ್ದೇನೆ. ಈ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ಮೊತ್ತದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ಬೀದರ್ ನಲ್ಲಿ 2 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ, ಕಲ್ಯಾಣ ಪಥ ಯೋಜನೆಗೆ ಚಾಲನೆ ಸೇರಿದಂತೆ ಅನೇಕ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಪ್ರತಿ ವರ್ಷ 5 ಸಾವಿರ ಕೋಟಿ ಮೊತ್ತವನ್ನು ಈ ಭಾಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಇದನ್ನು ನೋಡಿದರೆ ನಮ್ಮ ಕ್ಷೇತ್ರ ಕೂಡ ಈ ಭಾಗದಲ್ಲೇ ಇದ್ದಿದ್ದರೆ ನಮಗೂ ಇಷ್ಟು ದೊಡ್ಡ ಮಟ್ಟದ ಅನುದಾನ ಸಿಗುತ್ತಿತ್ತು ಎಂದು ಭಾವಿಸುತ್ತೇನೆ. ನಾನು ಡಿಸಿಎಂ ಆಗಿದ್ದರು ನನ್ನ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಮಗಾರಿ ಕೈಗೊಳ್ಳಲು ಆಗಿಲ್ಲ. ನೀವು ಅದೃಷ್ಟವಂತರು” ಎಂದರು.

“ಇಂದು ಕೆಪಿಎಸ್ ಶಾಲೆಗಳು, ಪ್ರಜಾಸೌಧಗಳ ಚಾಲನೆಗೆ ನಾವು ಬಂದಿದ್ದೇವೆ. ಈ ಕ್ಷೇತ್ರದ ಜನಪ್ರಿಯ ಶಾಸಕರಾದ ಅಜಯ್ ಸಿಂಗ್ ಅವರು ಎಲ್ಲರ ಮೇಲೆ ಒತ್ತಡ ತಂದು ಸಾವಿರಾರು ಕೋಟಿ ಅನುದಾನ ತಂದು ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಕೆಲಸ ಮಾಡುತ್ತಿದ್ದಾರೆ. ಇಂತಹ ಶಾಸಕರು ಸಿಕ್ಕಿರುವುದು ನಿಮ್ಮ ಭಾಗ್ಯ. ಧರಂ ಸಿಂಗ್ ಅವರಿಗಿಂತ ಒಂದು ಕೈ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

“ಕಲ್ಯಾಣ ಕರ್ನಾಟಕದಲ್ಲಿ ಕೆಪಿಎಸ್ ಶಾಲೆಗಳ ಪ್ರಾರಂಭ ನೋಡಿದಾಗ, ಒಂದು ಮಾತು ನೆನಪಾಗುತ್ತಿದೆ. ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ವಿದ್ಯೆ. ನಮ್ಮ ಸರ್ಕಾರ ಬಂದ ನಂತರ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ನನ್ನನ್ನು ಸಿಎಸ್ಆರ್ ಶಾಲೆಗಳ ಸಮಿತಿ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳನ್ನು ಸಿಎಸ್ಆರ್ ಅನುದಾನದ ಅಡಿ ನಿರ್ಮಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಮನಮೋಹನ್ ಸಿಂಗ್ ಅವರ ಸರ್ಕಾರ ಖಾಸಗಿ ಉದ್ಯಮಗಳು 2% ಸಿಎಸ್ಆರ್ ನಿಧಿ ನೀಡಬೇಕು ಎಂದು ತೀರ್ಮಾನ ಮಾಡಿದರು. ಈ ನಿಧಿಯನ್ನು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ತೀರ್ಮಾನವನ್ನು ಬೇರೆ ಯಾವುದೇ ರಾಜ್ಯಗಳ ಮಾಡಿಲ್ಲ. ಅಜಯ್ ಸಿಂಗ್ ಅವರು ನೀರಾವರಿ ವಿಚಾರವಾಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆ ಆಗಲೇಬೇಕು ಎಂದು ಪಟ್ಟು ಹಿಡಿದು, 360 ಕೋಟಿ ಅನುದಾನವನ್ನು ಪಡೆದಿದ್ದಾರೆ. ಇದಕ್ಕೆ ಕಳೆದ ಡಿಸೆಂಬರ್ 30ರಂದು ನಮ್ಮ ಸಭೆಯಲ್ಲಿ ಅನುಮೋದನೆ ನೀಡಿದ್ದೇವೆ. ಈ ಯೋಜನೆ ಕಾಮಗಾರಿ ಕೆಲಸ ಪ್ರಾರಂಭವಾಗಿದೆ” ಎಂದು ವಿವರಿಸಿದರು.

“ಇಲ್ಲಿ ಅನೇಕ ಮಹಿಳೆಯರು ಬಂದಿದ್ದೀರಿ. ನಮ್ಮ ಸರ್ಕಾರ ನಿಮಗೆ ಗ್ಯಾರಂಟಿ ಯೋಜನೆ ನೀಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇದೇ ಜಿಲ್ಲೆಯಲ್ಲಿ ನಾವು ಗೃಹಜ್ಯೋತಿ ಯೋಜನೆ ಉದ್ಘಾಟಿಸಿದೆವು. ಎಲ್ಲಾ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ. ಇಂತಹ ಸರ್ಕಾರ, ಶಾಸಕರಿಗೆ ಹಾಗೂ ಇಲ್ಲಿನ ಸಂಸದರಿಗೆ ನಿಮ್ಮ ಆಶೀರ್ವಾದ ಹೀಗೆ ಮುಂದುವರಿಯಲಿ” ಎಂದು ಮನವಿ ಮಾಡಿದರು.

“ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿ ಅವರು ಅಲಂಕರಿಸಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಎಲ್ಲಾ ಸಚಿವರು, ಶಾಸಕರು ಒಟ್ಟಾಗಿ ಸೇರಿ ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಾವು ನಿಮ್ಮ ಜೊತೆ ಸದಾ ಇದ್ದೇವೆ. ನಿನ್ನೆ ಅಜಯ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ 1 ಎಕರೆ ಜಮೀನನ್ನು ದಾನವಾಗಿ ಬರೆದುಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *