ದೆಹಲಿಯಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಏಳು ಸಚಿವರಲ್ಲಿ ಮುಖ್ಯಮಂತ್ರಿ ಸೇರಿದಂತೆ ಐವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ.
೨೦೨೫ರ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಸಚಿವರು ಸಲ್ಲಿಸಿದ ಅಫಿಡವಿಟ್ಗಳನ್ನು ಆಧರಿಸಿ ಈ ಅಧ್ಯಯನ ನಡೆದಿವೆ.
ಎಡಿಆರ್ ವಿಶ್ಲೇಷಣೆಯ ಪ್ರಕಾರ, 7 ಸಚಿವರಲ್ಲಿ ಐವರು (ಶೇ.71) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ, ಆದರೆ ಇಬ್ಬರು ಸಚಿವರು (ಶೇ.29) ಕೋಟ್ಯಾಧಿಪತಿಗಳಾಗಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಐದು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿಯು ಎತ್ತಿ ತೋರಿಸಿದೆ. ಅವರಲ್ಲಿ ಒಬ್ಬ ಸಚಿವ ಆಶಿಶ್ ಸೂದ್ ಅವರು ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಕೋಟ್ಯಾಧೀಶ ಸಚಿವರು: ರಾಜೌರಿ ಗಾರ್ಡನ್ ಕ್ಷೇತ್ರದ ಮಂಜಿಂದರ್ ಸಿಂಗ್ ಸಿರ್ಸಾ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡ ಸಚಿವರಾಗಿದ್ದಾರೆ. ಅವರು 248.85 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕಾರವಾಲ್ ನಗರ ಕ್ಷೇತ್ರದ ಕಪಿಲ್ ಮಿಶ್ರಾ ಅತಿ ಕಡಿಮೆ ಆಸ್ತಿ ಘೋಷಿಸಿಕೊಂಡ ಸಚಿವರಾಗಿದ್ದು, 1.06 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
7 ಸಚಿವರ ಸರಾಸರಿ ಆಸ್ತಿ 56.03 ಕೋಟಿ ರೂ.ಗಳಾಗಿದ್ದು, ಎಲ್ಲಾ ಏಳು ಸಚಿವರು ತಮ್ಮ ಸಾಲಗಳನ್ನು ಘೋಷಿಸಿಕೊಂಡಿದ್ದಾರೆ. ನವದೆಹಲಿ ಕ್ಷೇತ್ರದ ಪರ್ವೇಶ್ ಸಾಹಿಬ್ ಸಿಂಗ್ ಅತಿ ಹೆಚ್ಚು ಸಾಲಗಳನ್ನು ಹೊಂದಿದ್ದಾರೆ. ಅವರ ಆದಾಯ 74.36 ಕೋಟಿ ರೂ.ಗಳಾಗಿವೆ.
6 ಸಚಿವರು (ಶೇಕಡಾ 86) ಪದವಿ ಹಂತ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಘೋಷಿಸಿದ್ದರೆ, ಒಬ್ಬ ಸಚಿವರು ಕೇವಲ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ.
ವಯಸ್ಸಿನ ವಿಷಯದಲ್ಲಿ, ಐದು ಸಚಿವರು (ಶೇ.71) 41 ರಿಂದ 50 ವರ್ಷ ವಯಸ್ಸಿನವರಾಗಿದ್ದರೆ, ಉಳಿದ ಇಬ್ಬರು (ಶೇ.29) 51 ರಿಂದ 60 ವರ್ಷ ವಯಸ್ಸಿನವರು. ಸಂಪುಟದಲ್ಲಿ ಒಬ್ಬ ಮಹಿಳಾ ಸಚಿವೆ ಮಾತ್ರ ಇದ್ದು, ಅವರು ಸ್ವತಃ ಮುಖ್ಯಮಂತ್ರಿಯೇ ಆಗಿದ್ದಾರೆ.