ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವ ಕಾರ್ಯಕ್ರಮ ಜಾರಿಗೊಳಿಸುವುದಾಗಿ ಹೇಳಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಅನ್ಯಕೋಮಿನ ಯುವಕನಿಂದ ಆಗಸ್ಟ್ 3 ರಂದು ಕೊಪ್ಪಳದ ಕುರುಬರ ಓಣಿಯ ಗವಿಸಿದ್ದಪ್ಪ ನಾಯಕ ಕೊಲೆ ಆಗಿತ್ತು. ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಲು ಕೊಪ್ಪಳಕ್ಕೆ ಬಂದಿದ್ದ ಯತ್ನಾಳ್ ಹಿಂದೂ ಯುವಕರು ಮುಸ್ಲಿಂ ಯುವತಿಯರ ಮದುವೆಯಾದರೆ 5 ಲಕ್ಷ ರೂ. ಕೊಡುವ ಕಾರ್ಯಕ್ರಮ ತರುವುದಾಗಿ ಹೇಳಿ, ಈ ಮೂಲಕ ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾರವಿದೆ ಎಂದು ಹೇಳಿಕೆ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಕೊಪ್ಪಳದ ಕುವೆಂಪು ನಗರದ ನಿವಾಸಿ ಅಬ್ದುಲ್ ಕಲಾಂ ದೂರು ನೀಡಿದ್ದು ಯತ್ನಾಳ್ ಹೇಳಿಕೆಯಿಂದ ಎರಡು ಧರ್ಮಗಳ ನಡುವೆ ಶತ್ರುತ್ವವನ್ನು ಪ್ರಚೋದಿಸಲಾಗಿದೆ. ಮುಸ್ಲಿಂ ಮಹಿಳೆಯರನ್ನು ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು, ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಏನಾದರೂ ಹೇಳಿಕೆ ಇದ್ದರೇ ಅದೇ ಆರೋಪ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಹಿಂಬರಹ ನೀಡಿದ್ದಾರೆ ಎನ್ನಲಾಗಿದೆ.