Tuesday, September 02, 2025
Menu

ತುಮಕೂರು ದಸರಾ ಮೆರವಣಿಗೆಗೆ 5 ಆನೆ : ಪೂರ್ವಸಿದ್ಧತಾ ಸಭೆಯಲ್ಲಿ ಸಚಿವ ಪರಮೇಶ್ವರ್‌

ಕಳೆದ ವರ್ಷ ತುಮಕೂರು ದಸರಾ ಉತ್ಸವ ಎಲ್ಲ ವರ್ಗ, ಧರ್ಮ, ಜಾತಿಯವರನ್ನೊಳಗೊಂಡು ಆಚರಿಸಿದ್ದರಿಂದ ಯಶಸ್ವಿಯಾಯಿತು, ಈ ಬಾರಿಯ ದಸರಾ ಮೆರವಣಿಗೆಗೆ 5 ಆನೆಗಳನ್ನು ಬಳಸಲಾಗುತ್ತದೆ. ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

“ತುಮಕೂರು ದಸರಾ ಉತ್ಸವ 2025” ಆಚರಣೆಯ ಕುರಿತಂತೆ ದಸರಾ ಪ್ರಧಾನ ಸಮಿತಿ, ಎಲ್ಲ 23 ಉಪಸಮಿತಿಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ಹಾಗೂ ಅಧಿಕಾರೇತರ ಸದಸ್ಯರುಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ‌ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಸಚಿವರು ಮಾತನಾಡಿದರು.

ತುಮಕೂರು ದಸರಾ ಕಾರ್ಯಕ್ರಮದ ಕುರಿತು ಮಾನ್ಯ ಮುಖ್ಯಮಂತ್ರಿಯವರು ಸಹ ಉತ್ತೇಜನದ ಮಾತುಗಳನ್ನಾಡಿದ್ದಾರೆ. ಇಡೀ ರಾಜ್ಯದಲ್ಲಿ ನಮ್ಮ ರೀತಿ 9 ದಿನ ನವದುರ್ಗೆಯರಿಗೆ ಅಲಂಕರಿಸಿ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲೂ ಮಾಡಿಲ್ಲ. ಇದು ತುಮಕೂರಿನ ವಿಶೇಷ. ಜಿಲ್ಲೆಯಲ್ಲಿ ಸಾವಿರಾರು ದೇವಸ್ಥಾನಗಳಿವೆ. 75 ದೇವರುಗಳನ್ನು ಮೆರವಣಿಗೆ ಮಾಡಲಾಯಿತು. ಈ ಬಾರಿಯ ದಸರಾ ಮೆರವಣಿಗೆಗೆ 5 ಆನೆಗಳನ್ನು ಬಳಸಲಾಗುತ್ತದೆ ಎಂದರು.

ತುಮಕೂರು ಜಿಲ್ಲೆ ಕಲೆ, ನಾಟಕ, ಸಂಗೀತದಲ್ಲಿ ಪ್ರಖ್ಯಾತಿ ಪಡೆದಿದೆ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯತೆ ಇದೆ. ನಮ್ಮ ಜಿಲ್ಲೆಯಲ್ಲಿ ಹಲವು ಕಲಾವಿದರಿದ್ದು, ಗ್ರಾಮೀಣ ಭಾಗದ ಕಲಾ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ದಸರಾ ಆಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರಿಗಾಗಿ ಹೆಲಿಕ್ಯಾಪ್ಟರ್ ಡ್ರೈವ್ ಅವಕಾಶ ಕಲ್ಪಿಸಲಾಗಿದೆ. ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ದಸರಾ ಅಚರಣೆಗೆ ಎಲ್ಲ ರೀತಿಯ ಅಚ್ಚುಕಟ್ಟು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ತುಮಕೂರು ದಸರಾ ಉತ್ಸವ ಶಾಶ್ವತ ಲಾಂಛನ ಸಿದ್ಧಪಡಿಸಲಾಗುತ್ತಿದೆ. ಕಳೆದ ವರ್ಷ ಸಿದ್ಧಪಡಿಸಲಾಗಿದ್ದ 10 ತಾಲ್ಲೂಕುಗಳನ್ನು ಒಳಗೊಂಡ ದಸರಾ ಉತ್ಸವ ಬಾವುಟವನ್ನು ಈ ಬಾರಿಯೂ ಮುಂದುವರಿಸಲಾಗುವುದು ಎಂದು ತಿಳಿಸಿದರು.

ನಾವೆಲ್ಲ ಒಂದೇ ನಾಡಿನವರು. ಒಂದೇ ಸಂಸ್ಕೃತಿಯವರು ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಯಾವುದೇ ರೀತಿಯ ವ್ಯತ್ಯಾಸಗಳು ಬರಬಾರದು. ಯಾರ ಹೊಗಳಿಕೆ ಅಥವಾ ತೆಗಳಿಕೆಗಾಗಿ ದಸರಾ ಆಚರಿಸಲಾಗುತ್ತಿಲ್ಲ. ತುಮಕೂರಿನಲ್ಲಿ ಒಳ್ಳೆಯ ಜನರಿದ್ದಾರೆ. ಶಾಂತಿ, ಸೌಹಾರ್ದತೆ ಇದೆ ಎಂಬ ಸಂದೇಶ ಎಲ್ಲೆಡೆ ಹೋಗಬೇಕು‌ ಎಂದು ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಪಾವಘಡ ಶಾಸಕರಾದ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಹಾಗೂ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *