ಪಟಾಕಿ ಕಾರ್ಖಾನೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಭಾರೀ ಸ್ಫೋಟದಿಂದ ಕನಿಷ್ಠ ಐವರು ಸಾವನ್ನಪ್ಪಿದ್ದು, ಸುಮಾರು 25 ಜನರು ಗಾಯಗೊಂಡಿರುವ ಘಟನೆ ಪಂಜಾಬ್ನ ಶ್ರೀ ಮುಕ್ತಸರ್ ಸಾಹಿಬ್ನಲ್ಲಿ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಹೀಗಾಗಿ ಸ್ಥಳದಲ್ಲಿ ಹಲವು ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲೇ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ಶ್ರೀ ಮುಕ್ತಸರ್ ಸಾಹಿಬ್ನ ಸಿಂಘಾವಲಿ-ಕೋಟ್ಲಿ ರಸ್ತೆಯಲ್ಲಿರುವ 2 ಅಂತಸ್ತಿನ ಪಟಾಕಿ ಕಾರ್ಖಾನೆ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಆದ್ರೆ ಸ್ಫೋಟಕಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಲಂಬಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್ ಹೇಳಿದ್ದಾರೆ.
ಸ್ಥಳೀಯ ಪೊಲೀಸರು ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನ ಬಟಿಂಡಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ