ಬಾಗಲಕೋಟೆ: ಕಳೆದ ಹದಿನೈದು ದಿನಗಳಿಂದ ಮುಧೋಳದಲ್ಲಿ ನಡೆದಿದ್ದ ಕಬ್ಬ ಬೆಳೆಗಾರರ ಹೋರಾಟ ಗುರುವಾರ ಹಿಂಸಾರೂಪ ಪಡೆದುಕೊಂಡಿತ್ತು. ಆದರೆ ಶುಕ್ರವಾರ ಮುಧೋಳದ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ರೈತರು ಹೋರಾಟ ಹಿಂದೆ ಪಡೆದುಕೊಂಡಿದ್ದಾರೆ.
ಮುಧೋಳದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಲಾಯಿತು. ಆಗ ಮೊದಲ ಕಂತಾಗಿ ಪ್ರತಿ ಟನ್ ಗೆ 3200 ರೂ. ಹಾಗೂ ಎರಡನೇ ಕಂತಿನಲ್ಲಿ ಸರಕಾರದ 50 ರೂ. ಸೇರಿ 100 ರೂ. ಕೊಡುವುದಾಗಿ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದರು.
ಘೋಷಣೆಯಾದಂತೆ 14 ದಿನದಲ್ಲಿ ಕಾರ್ಖಾನೆಯವರು ರೈತರಿಗೆ ಹಣ ಸಂದಾಯ ಮಾಡಬೇಕು ಎಂದು ರೈತರು ಆಗ್ರಹಿಸಿದರು. ಅದಕ್ಕೆ ಕಾರ್ಖಾನೆ ಮಾಲೀಕರು ಸಂಗೋಳ್ಳಿ ರಾಯಣ್ಣ ಸರ್ಕಲ್ ನಲ್ಲಿ ರೈತರು ಹಾಕಿದ್ದ ಹೋರಾಟದ ಟೆಂಟ್ ಗೆ ಆಗಮಿಸಿ ಮುಚ್ಚಳಿಕೆ ಪತ್ರ ನೀಡಿದರು. ಆಗ ರೈತರು ಪ್ರತಿಭಟನೆ ಹಿಂದೆ ಪಡೆಯುವುದಾಗಿ ಘೋಷಿಸಿದರು.
ಕಳೆದ ಹದಿನೈದು ದಿನಗಳಿಂದ ಸಂಗೋಳ್ಳಿ ರಾಯಣ್ಣ ಸರ್ಕಲ್ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಮುಧೋಳ ತಾಲೂಕಿನ ರೈತರು ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಹಾಗೂ ಹಿಂದಿನ ಬಾಕಿ ನೀಡಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ರೈತರು ಪ್ರತಿಭಟನೆ ನಡೆಸಿದ್ದರು.
ಗುರುವಾರ ಬೆಳಗ್ಗೆ ಮುಧೋಳ ಪಟ್ಟಣ ಬಂದ್ ಕೂಡ ಮಾಡಿದ್ದರು. ಸಂಜೆ ವೇಳೆಗೆ ಗೋದಾವರಿ ಸಕ್ಕರೆ ಕಾರ್ಖಾನೆಗೆ ಬಂದ್ ರೈತರು ಅಲ್ಲಿ ನಿಂತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ ಜಿದ್ದಿಯವರಿಗೆ ಕಲ್ಲು ಬಡಿದು ಕಾಲು ಮುರಿದಿತ್ತು. ಇನ್ನು ಅನೇಕರಿಗೆ ಗಾಯಗಳಾಗಿತ್ತು. 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಹಾಗೂ ಕಬ್ಬಿಗೆ ಮತ್ತು ಬೈಕ್ ಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.


