ಉತ್ತರಾಖಂಡ್ ನ ಚಿಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಹಿಮಪಾತ ಸಂಭವಿಸಿದ್ದು, 42 ಕಾರ್ಮಿಕರು ಸಿಲುಕಿರುವ ಭೀತಿ ಇದೆ.
ಭಾರತ-ಟಿಬೆಟ್ ಗಡಿ ಭಾಗದಲ್ಲಿರುವ ಮಾನಾ ಗ್ರಾಮದ ಸೇನಾ ಶಿಬಿರದ ಬಳಿ ಹಿಮಪಾತ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯ ನಡೆಸಿ 15 ಮಂದಿಯನ್ನು ರಕ್ಷಿಸಲಾಗಿದೆ.
ಬದರೀನಾಥ ಜಲಾಶಯದಿಂದ ಕೇವಲ 3 ಕಿ.ಮೀ. ದೂರದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾಗ ರಸ್ತೆಯ ಮೇಲೆ ಹಿಮಪಾತ ಉಂಟಾಗಿದೆ. ಇದರಿಂದ ಕಾಮಗಾರಿಯಲ್ಲಿ ತೊಡಗಿದ್ದ 47 ಮಂದಿ ಸಿಲುಕಿರುವ ಶಂಕೆ ಇದೆ.
ಘಟನೆಯ ಮಾಹಿತಿ ಲಭಿಸಿದ ಕೂಡಲೇ ಮೂರರಿಂದ ನಾಲ್ಕು ಆಂಬುಲೆನ್ಸ್ ಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಆದರೆ ದಟ್ಟವಾದ ಹಿಮ ಪ್ರದೇಶದಲ್ಲಿ ಆವರಿಸಿರುವುದರಿಂದ ರಕ್ಷಣಾ ಕಾರ್ಯಕ್ಕೆ ವಿಘ್ನ ಉಂಟಾಗಿದೆ. ರಕ್ಷಣಾ ಕಾರ್ಯದಲ್ಲಿ 60ರಿಂದ 65 ಸೇನಾ ಸಿಬ್ಬಂದಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಪಾತದ ಮಾಹಿತಿ ತಿಳಿಯುತ್ತಿದ್ದಂತೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಂಗ್ ಧಾಮಿ ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಹಿಮಪಾತದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿ ಬರಲಿ ಎಂದು ಬದರಿನಾಥ ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.