Wednesday, August 06, 2025
Menu

3489 ಆಹಾರ ಮಾದರಿ ಪರಿಶೀಲನೆ: 17 ಅಸುರಕ್ಷಿತ,18 ಕಳಪೆ

Dinesh Gundu Rao food samples
 ಕಳೆದ ಜುಲೈನಲ್ಲಿ ರಾಜ್ಯಾದ್ಯಂತ 3489 ಆಹಾರ ಮಾದರಿಗಳನ್ನು ಸಂಗ್ರಹಿಸಿ ಒಳಪಡಿಸಿದ ಪರಿಶೀಲನೆಯಲ್ಲಿ 17 ಮಾದರಿಗಳು ಅಸುರಕ್ಷಿತ,18 ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ವರದಿ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರದ ಸುರಕ್ಷತೆ, ಗುಣಮಟ್ಟ, ನೈರ್ಮಲ್ಯತೆಯ ಕುರಿತ ರಾಜ್ಯಾದ್ಯಂತ 1557 ಬೀದಿ ಬದಿ ವ್ಯಾಪಾರ ಘಟಕಗಳನ್ನು ಪರಿವೀಕ್ಷಿಸಲಾಗಿದೆ. ಲೋಪಗಳು ಕಂಡು ಬಂದ 406 ಘಟಕಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ 44,500 ರೂ. ದಂಡ ವಿಧಿಸಲಾಗಿದೆ. ರಾಜ್ಯಾದ್ಯಂತ 1240 ಬಿದಿ ಬದಿ ಆಹಾರ ವ್ಯಾಪಾರಿಗಳಿಗೆ ನೈರ್ಮಲ್ಯತೆ ಮತ್ತು ಗುಣಮಟ್ಟ ಕುರಿತ ತರಬೇತಿಯನ್ನು ನೀಡಲಾಗಿದೆ. 866 ಬೀದಿಬದಿಯ ವ್ಯಾಪಾರ ಘಟಕಗಳಿಗೆ ಉಚಿತ ನೋಂದಣಿ ಮಾಡಲಾಗಿದೆ ಎಂದು ಹೇಳಿದರು

ರಾಜ್ಯಾದ್ಯಂತ 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳಿಗೆ ಪರಿಶೀಲನೆ ಮಾಡಲಾಗಿದೆ. ಲೋಪಗಳು ಕಂಡು ಬಂದಿರುವ 206 ಘಟಕಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿ 55 ಸಾವಿರ ರೂ. ದಂಡ ಹಾಕಲಾಗಿದೆ. 99 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ ಎಂದರು.

ರಾಜ್ಯಾದ್ಯಂತ 603 ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದೆ. 545 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಟ್ಟು 1263 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೊಂದಣಿ ಮಾಡಲಾಗಿದೆ. ರಾಜ್ಯಾದ್ಯಂತ 736 ಹೋಟೆಲ್/ರೆಸ್ಟೋರೆಂಟ್ ಗಳಿಗೆ ಪರಿಶೀಲಿಸಲಾಗಿದೆ. ಲೋಪಗಳು ಕಂಡು ಬಂದಿರುವ 190 ಘಟಕಗಳಿಗೆ ನೋಟಿಸ್‌ ಜಾರಿ ಮಾಡಿ 21500 ರೂ. ದಂಡ ಹಾಕಲಾಗಿದೆ ಎಂದು ತಿಳಿಸಿದರು.

291 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಹೈ ರಿಸ್ಕ್ ಆಹಾರ ಉದ್ದಿಮೆಗಳ ವರ್ಗದಡಿ ಬರುವ 1685 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಲಾಗಿದೆ. ಲೋಪ ಕಂಡುಬಂದಿರುವ 465 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ. 175 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 73 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದೆ. 4 ಮಾದರಿಗಳು ಕಳೆಗುಣಮಟ್ಟದ ಎಂದು, 69 ಮಾದರಿಗಳು ಸುರಕ್ಷಿತ ಎಂದು ವರದಿ ಬಂದಿದೆ ಎಂದು ವಿವರಿಸಿದರು.

ಇನ್ನೂ ಹೆಚ್ಚಿನ ಹಾಲಿನ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಆಗಸ್ಟ್ ನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ನಗರ ವ್ಯಾಪ್ತಿಯ ಎಂಪೈರ್ ಹೋಟೆಲ್​ಗಳಲ್ಲಿ 06 ಕಬಾಬ್ ಮಾದರಿಗಳನ್ನು ಸಂಗ್ರಹಿಸಲಾಗಿದೆ. 6 ಮಾದರಿಗಳೂ ಕೃತಕ ಬಣ್ಣಗಳನ್ನು ಹೊಂದಿದ್ದರಿಂದ ಅಸುರಕ್ಷಿತ ಎಂದು ವರದಿಯಾಗೆದೆ. ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದರು.

ಆಯುಷ್ ಇಲಾಖೆಯ ಆಯುರ್ವೇದ, ಸಿದ್ದ ಮತ್ತು ಯುನಾನಿ(ಎಎಸ್ ಯು) ಔಷಧಗಳ ಅಮಲು ಜಾರಿ ವಿಭಾಗ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಆಯುಷ್ ಔಷಧಗಳ ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ (ಎಫ್ ಡಿಎ) ಇಲಾಖೆಯ ಔಷಧ ನಿಯಂತ್ರಣ ವಿಭಾಗದ ಅಡಿಯಲ್ಲಿ ವಿಲೀನಗೊಳಿಸಲಾಗಿದೆ. ಇದರಿಂದ ಆರೋಗ್ಯ ಇಲಾಖೆಯಲ್ಲಿನ ಎಲ್ಲ ನಿಯಂತ್ರಣ ಕಾರ್ಯಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲ ಆಗುತ್ತದೆ ಎಂದು ಹೇಳಿದರು.

ಔಷಧ ಪರೀಕ್ಷಾ ಪ್ರಯೋಗಾಲಯವು ಜುಲೈನಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಗಳಲ್ಲಿನ ಔಷಧಿ ಅಂಗಡಿಗಳಲ್ಲಿನ ಒಟ್ಟು 1,433 ಔಷಧ ಮಾದರಿಗಳನ್ನು ವಿಶ್ಲೇಷಿಸಿದೆ. ಅವುಗಳಲ್ಲಿ 1,366 ಉತ್ತಮ ಗುಣಮಟ್ಟ ಮತ್ತು 59 ಔಷಧ ಮಾದರಿಗಳು ಅತ್ಯುತ್ತಮ ಗುಣಮಟ್ಟ ಎಂದು ವರದಿ ಬಂದಿದೆ. ಪ್ರಮಾಣಿತ ಗುಣಮಟ್ಟದ್ದಲ್ಲದ್ದ ಪ್ರಕರಣಗಳಲ್ಲಿ ರಾಜ್ಯಾದ್ಯಂತ ಜುಲೈನಲ್ಲಿ 40,48,436 ಲಕ್ಷ ರೂ. ಮೌಲ್ಯದ ಅನುತ್ತಮ ಗುಣಮಟ್ಟದ ಔಷಧ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಸಕಾಲದ ಅಡಿ 26 ಔಷಧ ಆಡಳಿತ ಸೇವೆಗಳನ್ನು ಒದಗಿಸಲಾಗುತ್ತಿದೆ. ಜುಲೈನಲ್ಲಿ ಒಟ್ಟು 1686 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 905 ಅರ್ಜಿಗಳು ವಿಲೇವಾರಿಯಾಗಿವೆ. ಔಷಧ ಆಡಳಿತದ ಅಮಲು ಜಾರಿ ಅಧಿಕಾರಿಗಳು ಜೂನ್ ತಿಂಗಳಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟಲು 279 ವಿಶೇಷ ಪರಿವೀಕ್ಷಣೆಯನ್ನು ಕೈಗೊಂಡರು. ಉಲ್ಲಂಘನೆ ಕಂಡು ಬಂದ ಪ್ರಕರಣಗಳಲ್ಲಿ ಒಟ್ಟು 231 ಶೋಕಾಸ್ ನೋಟೀಸ್ ನೀಡಲಾಗಿದೆ. 15 ಔಷಧ ಮಳಿಗೆಗಳಿಗೆ ಅನುಷ್ಠಾನ ಪತ್ರ ನೀಡಲಾಗಿದೆ ಎಂದರು.

ಇಲಾಖೆಯಿಂದ ನೀಡುತ್ತಿರುವ ಆನ್‌ಲೈನ್ ಸೇವೆಯನ್ನು ONDLS Portal ಗೆ Migrate ಆಗಿರುವುದರಿಂದ ರಕ್ತ ನಿಧಿ ಕೇಂದ್ರಗಳಿಗೆ ಆನ್‌ಲೈನ್ ಮೂಲಕವೇ ಪರವಾನಿಗೆಗಳನ್ನು ನೀಡಲಾಗುತ್ತಿದೆ. ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಗಳಲ್ಲಿ ಅಗತ್ಯ ಮಾದಕ ಔಷಧಗಳನ್ನು ಬಳಸಲು ಇಲಾಖೆಯಿಂದ RMI Certificate ನೀಡಲಾಗುತ್ತಿದೆ. ಅದನ್ನು ಆನ್​ಲೈನ್ ಮೂಲಕವೇ ಒದಗಿಸಲು ಇಲಾಖೆಯ ಆನ್‌ಲೈನ್ ಸೇಲ್ ವೆಬ್ ಸೈಟ್​ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ 30 ದಿನಗಳಲ್ಲಿ ಹಿಂಪಡೆಯಲಾಗುತ್ತಿದ್ದುದನ್ನು ಎರಡು ದಿನಗಳ ಅವಧಿಗೆ ಇಳಿಸಲಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *